ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ಗೆ ಸತತ 5ನೇ ಬಾರಿಗೆ ಸಾಧನಾ ಪ್ರಶಸ್ತಿ
ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸಂಘವು 2025-26ನೇ ಆರ್ಥಿಕ ಸಾಲಿನಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಸತತ ಐದನೇ ಬಾರಿಗೆ ಸಾಧನಾ ಪ್ರಶಸ್ತಿಗೆ ಭಾಜನವಾಗಿದೆ.
ಆಗಸ್ಟ್ 22ರಂದು ಶನಿವಾರ ನಡೆದ ಎಸ್‌ಸಿಡಿಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸಂಘಕ್ಕೆ ಸಾಧನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಘವು 2025-26ನೇ ಸಾಲಿನಲ್ಲಿ ಒಟ್ಟು ರೂ.1,088 ಕೋಟಿ ವ್ಯವಹಾರ, ರೂ.149.84 ಕೋಟಿ ಠೇವಣಿ, ರೂ.125.63 ಕೋಟಿ ಸಾಲ ವಿತರಣೆ ಹಾಗೂ ರೂ.4.04 ಕೋಟಿ ಲಾಭ ಗಳಿಸಿದೆ.
ಈ ಸಾಧನೆಯ ಹಿನ್ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸಂಘದ ಅಧ್ಯಕ್ಷರಾದ ಶ್ರೀ ಎಚ್. ಜಗನ್ನಾಥ ಸಾಲಿಯಾನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶಾಮ್ ಕೆ. ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಎಚ್.ಎನ್. ರಮೇಶ್, ಸಂಘದ ನಿರ್ದೇಶಕರಾದ ಶ್ರೀ ವಿಶ್ವನಾಥ ಎಂ., ಶ್ರೀ ದಯಾನಂದ ಆಳ್ವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ನಿರಂತರ ಪ್ರಗತಿ ಹಾಗೂ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಯ ಸಮನ್ವಯದ ಕಾರ್ಯವೈಖರಿ ಮತ್ತು ಸದಸ್ಯರ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಗಿದೆ.





























