ಮಂಗಳೂರು: ನಗರದ ಹೊರವಲಯದ ಅರ್ಕುಳ ತುಪ್ಪೆಕಲ್ಲುವಿನಲ್ಲಿ ಎಂಜಿನಿಯರಿಂಗ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಮೃತರನ್ನು ಕಡಬ ತಾಲೂಕಿನ ಕಾಣಿಯೂರು ನಿವಾಸಿ ಮನ್ವಿತ್ (20) ಎಂದು ಗುರುತಿಸಲಾಗಿದೆ. ಅವರು ಕಾಲೇಜಿನ ವ್ಯಾಸಂಗದ ಹಿನ್ನೆಲೆಯಲ್ಲಿ ಅರ್ಕುಳ ತುಪ್ಪೆಕಲ್ಲುವಿನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.
ಬುಧವಾರ ತಾವು ವಾಸವಿದ್ದ ಕೊಠಡಿಯಲ್ಲೇ ಮನ್ವಿತ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನೆಗೆ ಸಂಬಂಧಿಸಿ ಕಂಕನಾಡಿ ನಗರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.





























