ಪುತ್ತೂರು: ಪುತ್ತೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಿಗೆ ಕೆಲವರು ತಳ್ಳಾಟ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಘಟನೆ ಸೆ. 1ರಂದು ನಡೆದಿದೆ.
ಪುತ್ತೂರು ತಾಲೂಕಿನ ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಅವರು ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದೂರಿನ ಪ್ರಕಾರ, ಅಬ್ದುಲ್ ಹಕೀಂ ಅವರು ತಮ್ಮ ವಿರುದ್ಧ ಮಾಡಲಾಗಿರುವ ಕೆಲವು ಆರೋಪಗಳಿಗೆ ಸ್ಪಷ್ಟನೆ ನೀಡುವ ಸಲುವಾಗಿ ಸೆ. 1ರಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಲು ಪುತ್ತೂರಿನ ಪ್ರೆಸ್ ಕ್ಲಬ್‌ಗೆ ಆಗಮಿಸಿದ್ದರು. ಈ ವೇಳೆ ಉದಯ ಪಾಟಾಳಿ, ಜುನೈದ್ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಂ ಬೋಳ್ವಾರು, ಮೋನು ಬಪ್ಪಳಿಗೆ, ನಾಶಿರ್ ಕೊಲ್ಪೆ, ಪ್ರವೀಣ್ ಆಚಾರ್ಯ ಸೇರಿದಂತೆ ಇತರರು ಸೇರಿಕೊಂಡು ತಮ್ಮನ್ನು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ನಂತರ ತಾವು ಪ್ರೆಸ್ ಕ್ಲಬ್ ಒಳಗೆ ತೆರಳಿದಾಗ, ಹೊರಗೆ ಬರದಂತೆ ಆರೋಪಿಗಳು ಅಕ್ರಮವಾಗಿ ತಡೆದಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ತಳ್ಳಾಟದಿಂದ ನೋವು ಉಂಟಾದ ಹಿನ್ನೆಲೆಯಲ್ಲಿ ಅಬ್ದುಲ್ ಹಕೀಂ ಅವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 105/2026ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 127(2), 351(1), 351(2), 351(3), 352, 115 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




























