ಉಪ್ಪಿನಂಗಡಿ, ಸೆ.4: ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ನಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 3ರಂದು ರಾತ್ರಿ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ಪೊಲೀಸ್ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ವೊಂದರ ಸಮೀಪ ಬೊಲೆರೋ ಪಿಕಪ್ ವಾಹನ ನಿಂತಿದ್ದು, ಅದರ ಪಕ್ಕದಲ್ಲಿ ಮೂವರು ಅನುಮಾನಾಸ್ಪದವಾಗಿ ನಿಂತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಪೊಲೀಸರನ್ನು ಕಂಡು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಇಬ್ಬರನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ವಿಚಾರಣೆ ವೇಳೆ ಬಂಧಿತರನ್ನು ಮಂಡ್ಯ ಜಿಲ್ಲೆಯ ಮದ್ದೂರು ನಿವಾಸಿಗಳಾದ ಜೈಮುತ್ತಾ (23) ಮತ್ತು ಮುತ್ತು (28) ಎಂದು ಗುರುತಿಸಲಾಗಿದೆ. ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಕ್ಯಾನ್‌ನಲ್ಲಿ ತುಂಬಿಸಿಟ್ಟಿದ್ದ ಸುಮಾರು 20 ಲೀಟರ್ ಡೀಸೆಲ್, ಖಾಲಿ ಕ್ಯಾನ್‌ಗಳು, ಡೀಸೆಲ್ ಕಳವಿಗೆ ಬಳಸುತ್ತಿದ್ದ ರಬ್ಬರ್ ಪೈಪ್ ಸೇರಿದಂತೆ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2026, ಬಿಎನ್‌ಎಸ್‌ಎಸ್ 2023ರ ಕಲಂ 35(1)(ಡಿ) ಹಾಗೂ ಬಿಎನ್‌ಎಸ್ 2023ರ ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.





























