ಮುಲ್ಕಿ: ಪ್ರವಾಸಿ ಮಿನಿ ಬಸ್ವೊಂದು ಶಾಲಾ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 13 ವಿದ್ಯಾರ್ಥಿಗಳು ಸೇರಿದಂತೆ 14 ಮಂದಿ ಗಾಯಗೊಂಡ ಘಟನೆ ಅ.23ರಂದು ಸಂಜೆ ಮುಲ್ಕಿ ಕೊಲ್ನಾಡು ಸಮೀಪದ ಸುಂದರರಾಮ್ ಶೆಟ್ಟಿ ಸಭಾಂಗಣದ ಬಳಿ ನಡೆದಿದೆ.
ಮಂಗಳೂರು ಕಡೆಗೆ ತೆರಳುತ್ತಿದ್ದ ಬೆಂಗಳೂರಿನ ಎಸ್ಆರ್ಎಸ್ ಪ್ರವಾಸಿ ಸಂಸ್ಥೆಗೆ ಸೇರಿದ KA-01-AR-1655 ನೋಂದಣಿ ಸಂಖ್ಯೆಯ ಮಿನಿ ಬಸ್ ಅನ್ನು ಚಾಲಕ ದೇವರಾಜ್ ಎಂಬವರು ಚಲಾಯಿಸುತ್ತಿದ್ದರು. ಸಂಜೆ ಸುಮಾರು 3.40ರ ವೇಳೆಗೆ ಕೊಲ್ನಾಡು ಸಮೀಪ ನಿಂತಿದ್ದ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ನ ಶಾಲಾ ಬಸ್ಸಿಗೆ ಮಿನಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಶಾಲಾ ಬಸ್ ಸಮೀಪದ ಚರಂಡಿಗೆ ಬಿದ್ದಿದೆ. ಈ ವೇಳೆ ಶಾಲಾ ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳು ಹಾಗೂ ಚಾಲಕ ದೇವದಾಸ್ ಅವರಿಗೆ ಸಾಮಾನ್ಯ ಗಾಯಗಳಾಗಿವೆ. ಗಾಯಾಳುಗಳನ್ನು ಮುಕ್ಕದ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 248/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 281 ಮತ್ತು 125(ಎ)ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


























