ವಿಟ್ಲ: ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2025-26 ನೇ ಸಾಲಿನಲ್ಲಿ 238.99 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 1.47 ಕೋಟಿ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.13 ಡಿವಿಡೆಂಡ್ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ಎನ್. ಹೇಳಿದರು.
ಅವರು ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
2025-26ನೇ ಸಾಲಿನಲ್ಲಿ 121 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 18.34ಲಕ್ಷ ರೂ. ಪಾಲು ಬಂಡವಾಳವಿದೆ. ಪ್ರಸಕ್ತ ವರ್ಷದಲ್ಲಿ 5511 ಎ ತರಗತಿ ಸದಸ್ಯರಿದ್ದು, 3.90ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 39.60ಕೋಟಿ ಠೇವಣಾತಿಯನ್ನು ಹೊಂದಿ ಶೇ.9.76 ಹೆಚ್ಚಳವಾಗಿದೆ. 39.25ಕೋಟಿ ಕೃಷಿ ಹಾಗೂ ಕೃಷಿಯೇತರ ಸಾಲ ನೀಡಿದ್ದು, ಶೇ.96.41ರಷ್ಟು ವಸೂಲಿ ಮಾಡಲಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘ ಎ ತರಗತಿಯನ್ನು ಹೊಂದಿದೆ. ವಿಟ್ಲ ಪ್ರಧಾನ ಕಚೇರಿ ಮತ್ತು ಕುಂಡಡ್ಕ ಶಾಖೆಯಲ್ಲಿ ನಡೆದ ವ್ಯಾಪಾರದಲ್ಲಿ ರೂ.12.32 ಲಕ್ಷ ಲಾಭ ಬಂದಿದೆ ಎ೦ದರು.
ಸಂಘದ ಆಶ್ರಯದಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ಶಿಬಿರ ಏರ್ಪಡಿಸಲಾಗಿದೆ. ಸಂಘ ಸಾಧಿಸಿದ ಪ್ರಗತಿಯನ್ನು ಗುರುತಿಸಿ ದ.ಕ.ಜಿ.ಸಹಕಾರಿ ಬ್ಯಾಂಕಿನಿಂದ ಕಳೆದ ಹತ್ತು ವರ್ಷಗಳಿಂದ ವಿಶೇಷ ಪ್ರೋತ್ಸಾಹಕ ಬಹುಮಾನ ಲಭಿಸಿದೆ. ಸರಕಾರದ ಬೆಳೆ ವಿಮೆ, ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಲ್ಲಿ ಸದಸ್ಯರು ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಹೇಳಿದರು.
ಮಹಾಸಭೆಯನ್ನು ಸೇರಾಜೆ ಸುಬ್ರಹ್ಮಣ್ಯ ಭಟ್ ಮತ್ತು ಭೋಜಪ್ಪ ಗೌಡ ಮಾಡತ್ತಾರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸದಸ್ಯರ ಪ್ರತಿಭಾವಂತ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕರಾದ ಉದಯ ಕುಮಾರ್ ಎನ್., ರಾಘವೇಂದ್ರ ಪೈ ಎ., ದಿನೇಶ ಕೆ., ಸಂಧ್ಯಾ ಮೋಹನ್, ವಾಸು ಸಿ.ಎಚ್., ಹರೀಶ್ ನಾಯ್ಕ ತೀರ್ಥರಾಮ ಉಪಸ್ಥಿತರಿದ್ದರು.
ನಿಧನ ಹೊಂದಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನ ಪ್ರಾರ್ಥನೆ ನಡೆಸಲಾಯಿತು.
ನಿರ್ದೇಶಕ ಸದಾನಂದ ಗೌಡ ಸೇರಾಜೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಮಹಾಬಲೇಶ್ವರ ಭಟ್ ಆಲಂಗಾರು ವಂದಿಸಿದರು. ನಿರ್ದೇಶಕ ಮೋಹನದಾಸ್ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.ಉಪಕಾರ್ಯನಿರ್ವಹಣಾಧಿಕಾರಿ ಶೋಭಾ ಸಹಕರಿಸಿದರು.



























