ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಲೆಕ್ಕಪತ್ರಗಳು ಸಂಪೂರ್ಣವಾಗಿ ಕ್ರಮಬದ್ಧವಾಗಿದ್ದು,ದೇವಸ್ಥಾನದ ಹಣಕಾಸಿನ ವ್ಯವಹಾರಗಳ ಕುರಿತು ಭಕ್ತರಲ್ಲಿ ಯಾವುದೇ ಗೊಂದಲ ಮೂಡಿಸುವ ಅಗತ್ಯವಿಲ್ಲ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ದೇವಸ್ಥಾನದ ಲೆಕ್ಕಪತ್ರಗಳ ಕುರಿತು ಕೆಲವರು, ಪೆಟ್ಟಿ ಕ್ಯಾಶ್ ಗಳನ್ನು ಮಾಡಲಾಗಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ, ಕೂಲಿಕಾರ್ಮಿಕರಿಗೆ ಪಾವತಿ ಮಾಡುವ ಸಲುವಾಗಿ ಪೆಟ್ಟಿ ಕ್ಯಾಶ್ ವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಇದು ಹೊಸದಾಗಿ ಮಾಡಿರುವ ವ್ಯವಸ್ಥೆಯಲ್ಲ.
ವಿಶೇಷವಾಗಿ ಜಾತ್ರೆಯ ಸಂದರ್ಭಗಳಲ್ಲಿ ವಿವಿಧ ಕೆಲಸಗಳಿಗೆ ತಕ್ಷಣವೇ ಪಾವತಿ ಮಾಡಬೇಕಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲಿಯೂ ಕನಿಷ್ಠ 55 ಮಂದಿ ಕಾರ್ಮಿಕರಿಗೆ ಪಾವತಿ ಮಾಡಬೇಕಾದ ಸಂದರ್ಭಗಳಿರುತ್ತವೆ. ಈ ರೀತಿಯ ಪಾವತಿಗಳಿಗೂ ಸೂಕ್ತ ಲೆಕ್ಕಪತ್ರ ನಿರ್ವಹಿಸಲಾಗುತ್ತಿದೆ ಎಂದು ಕೆ.ವಿ.ಶ್ರೀನಿವಾಸ್ ಹೇಳಿದರು.
ದೇವಸ್ಥಾನದ ಪ್ರತಿಯೊಂದು ಪಾವತಿಗೂ ಲೆಕ್ಕವಿದೆ. ಯಾವುದೇ ಒಂದು ಲೆಕ್ಕಾಚಾರದ ಬಗ್ಗೆ ಭಕ್ತರಿಗೆ ಅಥವಾ ಸಾರ್ವಜನಿಕರಿಗೆ ಅನುಮಾನವಿದ್ದರೆ ದೇವಸ್ಥಾನದ ಕಚೇರಿಗೆ ಬಂದು ಪರಿಶೀಲಿಸಬಹುದು. ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶ ತಿಳಿದುಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದರು.
ದೇವಸ್ಥಾನದ ಹಣಕಾಸಿನ ವ್ಯವಹಾರಗಳ ಕುರಿತು ಯಾವುದೇ ಆಧಾರವಿಲ್ಲದೆ ಹೇಳಿಕೆ ನೀಡುವುದರಿಂದ ಭಕ್ತರಲ್ಲಿ ಅನಗತ್ಯ ಗೊಂದಲ ಉಂಟಾಗುತ್ತದೆ.ಆದ್ದರಿಂದ ಸುಮ್ಮನೆ ಭಕ್ತಾದಿಗಳಲ್ಲಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದ್ದು, ಲೆಕ್ಕಪತ್ರಗಳ ಬಗ್ಗೆ ಯಾರಿಗಾದರೂ ಪ್ರಶ್ನೆಗಳಿದ್ದರೆ ಕಚೇರಿಗೆ ಬಂದು ಪರಿಶೀಲಿಸಿ ಮಾಹಿತಿ ಪಡೆಯಬಹುದು ಎಂದು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ತಿಳಿಸಿದರು.




























