ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ವ್ಯವಸ್ಥಾಪನಾ ಸಮಿತಿಯ ಕಾರ್ಯವೈಖರಿ ಕುರಿತು ಕೇಳಿಬರುತ್ತಿರುವ ಆರೋಪಗಳಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.
ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪ್ರಶ್ನೆ ಕೇಳುವ ಹಕ್ಕು ಹೊಂದಿದ್ದಾರೆ. ಆದರೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡುವಾಗ ವಾಸ್ತವಾಂಶಗಳನ್ನು ಅರಿತುಕೊಳ್ಳುವುದು ಅಗತ್ಯ ಎಂದರು.
ವ್ಯವಸ್ಥಾಪನಾ ಸಮಿತಿ ರಚನೆಯಾದ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನ ಹಾಗೂ ಭಕ್ತರ ಸಹಕಾರದೊಂದಿಗೆ ದೇವಸ್ಥಾನದಲ್ಲಿ ಹಲವು ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪೂಜಾ ವ್ಯವಸ್ಥೆ, ದೇವಸ್ಥಾನದ ಜಾಗಗಳ ಮರುಸ್ವಾಧೀನ, ಅನ್ನಪ್ರಸಾದ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಕ್ರಮಗಳಿಗೆ ಬಹುತೇಕ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಈಶ್ವರ ಭಟ್ ಹೇಳಿದರು.
ಭಕ್ತರ ಸಹಕಾರದಿಂದ ಅನ್ನಪ್ರಸಾದ ವ್ಯವಸ್ಥೆ
ದೇವಸ್ಥಾನದ ಅನ್ನಪ್ರಸಾದ ವ್ಯವಸ್ಥೆಗೆ ಭಕ್ತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಅಕ್ಕಿಗಾಗಿ ಭಕ್ತರಲ್ಲಿ ಮನವಿ ಮಾಡಿದ ಬಳಿಕ ಸುಮಾರು ₹50 ಲಕ್ಷ ಮೌಲ್ಯದ ವ್ಯವಸ್ಥೆ ರೂಪುಗೊಂಡಿದೆ. ದೇವಸ್ಥಾನದ ಅನ್ನಪ್ರಸಾದಕ್ಕೆ ಅಗತ್ಯವಾದ ಅಕ್ಕಿಯನ್ನು ಭಕ್ತರೇ ನೀಡುತ್ತಿರುವುದು ವ್ಯವಸ್ಥೆಗೆ ದೊರೆಯುತ್ತಿರುವ ಜನಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಅದೇ ರೀತಿ ಸ್ವರ್ಣ ಕವಚ ನಿರ್ಮಾಣಕ್ಕಾಗಿ ಈಗಾಗಲೇ ಭಕ್ತರಿಂದ 520 ಗ್ರಾಂ ಚಿನ್ನ ಸಂಗ್ರಹವಾಗಿದೆ. ದಾನಿಗಳಿಂದ ಸ್ವೀಕರಿಸಲಾಗುತ್ತಿರುವ ಚಿನ್ನ ಹಾಗೂ ಇತರ ದೇಣಿಗೆಗಳ ವಿವರಗಳನ್ನು ಪ್ರತಿದಿನದ ಲೆಕ್ಕಪತ್ರದಲ್ಲಿ ದಾಖಲಿಸಲಾಗುತ್ತಿದ್ದು, ದಾನಿಗಳಿಗೆ ರಶೀದಿ ನೀಡಲಾಗುತ್ತಿದೆ. ಪ್ರಸ್ತುತ 520 ಗ್ರಾಂ ಚಿನ್ನವನ್ನು ದೇವಸ್ಥಾನದ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಈಶ್ವರ ಭಟ್ ಹೇಳಿದರು.
₹80 ಕೋಟಿ ಮೌಲ್ಯದ 11 ಎಕರೆ ಜಾಗ ವಶಕ್ಕೆ
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಕೆಲವರು ಮಾಡುತ್ತಿರುವ ಆರೋಪಗಳ ಹಿಂದೆ ಬೇರೆ ಉದ್ದೇಶಗಳಿರಬಹುದು ಎಂದು ಈಶ್ವರ ಭಟ್ ಅಭಿಪ್ರಾಯಪಟ್ಟರು.
ದೇವಸ್ಥಾನಕ್ಕೆ ಸೇರಿದ ಸುಮಾರು ₹80 ಕೋಟಿ ಮೌಲ್ಯದ 11 ಎಕರೆ ಜಾಗವನ್ನು ಈಗಾಗಲೇ ದೇವಳದ ವಶಕ್ಕೆ ಪಡೆಯಲಾಗಿದೆ. ಇನ್ನೂ ಕೋಟ್ಯಂತರ ರೂಪಾಯಿ ಮೌಲ್ಯದ ದೇವಸ್ಥಾನದ ಜಾಗ ಕೆಲವರ ವಶದಲ್ಲಿದ್ದು, ಸುಮಾರು ₹10 ಕೋಟಿ ಮೌಲ್ಯದ ಜಾಗವನ್ನು ಶೀಘ್ರದಲ್ಲೇ ದೇವಸ್ಥಾನದ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ದೇವಸ್ಥಾನದ ಜಾಗ ತಮ್ಮ ಕೈತಪ್ಪುವ ಆತಂಕದಿಂದ ಕೆಲವರು ವ್ಯವಸ್ಥಾಪನಾ ಸಮಿತಿಯ ವಿರುದ್ಧ ಅಪಪ್ರಚಾರ ನಡೆಸಿ, ಸಮಿತಿಯನ್ನು ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ತಮ್ಮ ಅಭಿಪ್ರಾಯ ಎಂದು ಈಶ್ವರ ಭಟ್ ಆರೋಪಿಸಿದರು.
“ಮಹಾಲಿಂಗೇಶ್ವರ ದೇವರಿಗೆ ಸೇರಿದ ಜಾಗವನ್ನು ನಮ್ಮ ಸಮಿತಿ ಇರುವವರೆಗೆ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಯಾರೇ ಅಡ್ಡಿಪಡಿಸಿದರೂ ನಾವು ಹೆದರುವುದಿಲ್ಲ. ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿಯೇ ತೀರುತ್ತೇವೆ,” ಎಂದು ಅವರು ಸ್ಪಷ್ಟಪಡಿಸಿದರು.
2028ರಲ್ಲಿ ಬ್ರಹ್ಮಕಲಶೋತ್ಸವದ ಗುರಿ
ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಮುಂದುವರಿಸಿ, 2028ರಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದು ಈಶ್ವರ ಭಟ್ ತಿಳಿಸಿದರು.
ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರವೇ ವ್ಯವಸ್ಥಾಪನಾ ಸಮಿತಿಯ ಪ್ರಮುಖ ಉದ್ದೇಶವಾಗಿದ್ದು, ಯಾವುದೇ ಅಪಪ್ರಚಾರಗಳಿಗೆ ಭಕ್ತರು ಕಿವಿಗೊಡದೆ ವಾಸ್ತವಾಂಶವನ್ನು ಅರಿತು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಬ್ರಹ್ಮಕಲಶೋತ್ಸವದ ದಿನಾಂಕವನ್ನು ತಂತ್ರಿಗಳು ನಿಗದಿಪಡಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.




























