ಪುತ್ತೂರು: ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದ ಮಹಿಳೆಗೆ ಆಟೋ ರಿಕ್ಷಾದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆಟೋ ಚಾಲಕನೊಬ್ಬನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ಸೆ. 9ರಂದು ಬೆಳಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದರು. ಪರಿಚಯದ ಬಾಲಕೃಷ್ಣ ಎಂಬವರು ಚಾಲಕರಾಗಿದ್ದ KA-21-B-2011 ನೋಂದಣಿ ಸಂಖ್ಯೆಯ ಆಟೋ ರಿಕ್ಷಾದಲ್ಲಿ ಅವರು ಪುತ್ತೂರು ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಚಾಲಕನು ಮಾರ್ಗ ಬದಲಿಸಿ ರಿಕ್ಷಾವನ್ನು ಕುರಿಯ ಎಂಬಲ್ಲಿಗೆ ಕೊಂಡೊಯ್ದು ನಿಲ್ಲಿಸಿ, ಬಳಿಕ ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 117/2026ರಂತೆ ಕಲಂ: 74,75,64 ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಾಲಕೃಷ್ಣ ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.



























