ಬೆಳ್ತಂಗಡಿ : ಹಿರಿಯ ಸಹಕಾರಿ ಧುರೀಣ ಎನ್. ಎಸ್. ಗೋಖಲೆ (75 ವ) ಹೃದಯಾಘಾತದಿಂದ ಜೂ.30 ರಂದು ಮುಂಡ್ರುಪಾಡಿಯ ಮನೆಯಲ್ಲಿ ನಿಧನರಾದರು.
ಸಹಕಾರಿ ತತ್ವದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು ಜಿಲ್ಲೆಯ ಹಲವು ಸಂಘ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಮುಂಚೂಣಿ ಯಲ್ಲಿದ್ದರು.
ಮೂಲತಃ ಕೃಷಿಕರು. ಜತೆಗೆ ಸಾಮಾಜಿಕ – ಧಾರ್ಮಿಕ ಕ್ಷೇತ್ರದಲ್ಲಿ ಅಪ್ರತಿಮವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಎನ್.ಎಸ್ ಗೋಖಲೆ ಅವರು, ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಗಿ ಕ್ರಿಯಾಶೀಲ ಸೇವೆ ಸಲ್ಲಿಸಿದ್ದರು. ಶತಮಾನೋತ್ಸವ ಸಂಭ್ರಮ ಆಚರಿಸಿದ್ದ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಿಂದೆ ಅಧ್ಯಕ್ಷರೂ ಆಗಿದ್ದ ಅವರು ಅಭಿವೃದ್ದಿಯ ಮಹಾಕನಸು ಕಂಡಿದ್ದರು.
ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಮತ್ತು ಆಳವಾದ ಅನುಭವ ಹೊಂದಿದ್ದ ಅವರು ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಮಾಸ್ ಲಿಮಿಟೆಡ್, ಟಿಎಪಿಸಿಎಂಎಸ್, ಕ್ಯಾಂಪ್ಕೋ ಸಹಿತ ವಿವಿಧ ಸಂಸ್ಥೆಗಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದರು.ಕೃಷಿಕರನ್ನು ಋಣಮುಕ್ತರನ್ನಾಗಿಸುವ ದೂರದೃಷ್ಟಿಯ ಯೋಜನೆ ಪರಿಕಲ್ಪಿಸಿದ್ದ ಅವರು ತಾನು ಮುಂಡಾಜೆ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಪ್ರತ್ಯೇಕ ನಿಧಿ ಸ್ಥಾಪಿಸಿದ್ದರು. ಸಾಲ ತೀರುವಳಿ ಯೋಜನೆ ಎಂಬ ಅವರ ಆಲೋಚನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದಲೇ ಬಜೆಟ್ ಮೂಲಕ ನಿಧಿ ದೊರೆಯುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಿದ್ದರು.
ಅಪೂರ್ವ ಸಂಘಟಕರೂ ಆಗಿದ್ದ ಎನ್.ಎಸ್ ಗೋಖಲೆ ಅವರು ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲೂ ಗುರುತಿಸಿಕೊಂಡು ಉತ್ತಮ ಅರ್ಥದಾರಿಯಾಗಿಯೂ ಪಾತ್ರ ನಿರ್ವಹಿಸುತ್ತಿದ್ದರು. ಎನ್.ಎಸ್ ಗೋಖಲೆ ಅವರಿಗೆ ಜಿಲ್ಲಾರಾಜ್ಯೋತ್ಸವ ಪುರಸ್ಕಾರ ಲಭಿಸಿತ್ತು.
ಎನ್. ಎಸ್. ಗೋಖಲೆ ರವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.