ಮಂಗಳೂರು : ಕೊರೋನಾದ ನಿಯಮಾವಳಿಯನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿರುವ ಕಂಕನಾಡಿ ಪೊಲೀಸರು ಮ್ಯಾನೇಜರ್ ಹಾಗೂ ಮತ್ತೋರ್ವನನ್ನು ಬಂಧಿಸಿದ್ದಾರೆ.
ಕಂಕನಾಡಿ, ಫಳ್ನೀರ್ ರಸ್ತೆಯ ಹಸನ್ ಹೆರಿಟೇಜ್ ನಲ್ಲಿ ಕ್ಲೌಡ್ ಶೀಶಾ ಕೆಫೆ ಎಂಬ ಹುಕ್ಕಾ ಬಾರ್ ಕಾರ್ಯಾಚರಿಸುತ್ತಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಹುಕ್ಕಾ ಬಾರ್ ತೆರೆಯಲು ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ. ಆದರೆ, ಕ್ಲೌಡ್ ಶೀಶಾ ಕೆಫೆ ಎಂಬ ಹುಕ್ಕಾ ಬಾರ್ ಮಾಲಕರು ನಿಯಮಾವಳಿಯನ್ನು ಉಲ್ಲಂಘಿಸಿ ಎದುರಿನ ಶೆಟರ್ ಅನ್ನು ಮುಚ್ಚಿ ಹಿಂಬಾಗಿಲಿನಿಂದ ಗ್ರಾಹಕರಿಗೆ ಬರಲು ಅವಕಾಶ ನೀಡಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ದಾಳಿ ನಡೆಸಿರುವ ಕಂಕನಾಡಿ ಪೊಲೀಸರು ಹುಕ್ಕಾಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿ ಹುಕ್ಕಾ ಬಾರ್ ನಡೆಸುತ್ತಿರುವ ಮ್ಯಾನೇಜರ್ ಹಾಗೂ ಸಂಸ್ಥೆಗೆ ಸಂಬಂಧಿಸಿದ ಮತ್ತೋರ್ವನನ್ನು ಬಂಧಿಸಿದ ಪೊಲೀಸರು 17 ಗ್ರಾಹಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕ್ಲಬ್ ಶೀಶಾ ಕೆಫೆ ಹುಕ್ಕಾ ಬಾರ್ ನ ಪರವಾನಿಗೆಯನ್ನು ರದ್ದು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.