ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಧಾರ್ಮಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾರುವ ನಿಟ್ಟಿನಲ್ಲಿ ಪುತ್ತೂರು ದೀಪೋತ್ಸವ-2026 ಅನ್ನು ಡಿ.8ಕ್ಕೆ ಆಯೋಜಿಸಲಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವರ ಅಪ್ಪಣೆ ಪಡೆಯಲು ವಿಶೇಷ ಪ್ರಾರ್ಥನೆಯನ್ನು ಸೆ.9ರಂದು ದೇವಳದಲ್ಲಿ ಮಾಡಲಾಯಿತು.
ದೀಪೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಅವರ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಜೊತೆಯಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಉಪಸ್ಥಿತಿಯಲ್ಲಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಕಾರ್ಯಕ್ರಮಕ್ಕೆ ಅಪ್ಪಣೆ ಪಡೆದು ಯಶಸ್ಸಿಗಾಗಿ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಸಮಿತಿ ಡಾ.ರವೀಶ ಪಡುಮಲೆ, ಉದ್ಯಮಿ ಕರುಣಾಕ ರೈ ದೇರ್ಲ, ಗೋಪಾಲ️ಕೃಷ್ಣ ಎಂ, ದಾಮೋದರ್ ಪಾಟಾಳಿ, ಸಂತೋಷ್ ಕುಮಾರ್, ಹರಿಣಾಕ್ಷಿ ಜೆ ಶೆಟ್ಟಿ, ನಯನಾ ರೈ, ರೇಣುಕಾ ಮುರಳಿಧರ ರೈ, ಅಮಿತಾ ಶೆಟ್ಟಿ ನುಳಿಯಾಲು, ರತ್ನಾಕರ್ , ಸುಜೀರ್ ಶೆಟ್ಟಿ, ಸಂತೋಷ್ ಕುಮಾರ್ ರೈ ಕೈಕಾರ, ಪ್ರವೀಣ್ ಕುಮಾರ್ ರೈ ಸಹಿತ ಹಲಾವರು ಮಂದಿ ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಪ್ರಾರ್ಥನೆ ನೆರವೇರಿಸಿದರು.
ಪ್ರಥಮ ಬಾರಿಗೆ ತೆಂಕು, ಬಡಗು ತಿಟ್ಟುಗಳ ಕಲಾ ವೈಭವ:
ದೀಪೋತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭಗೊಳ್ಳಲಿದೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, 11 ಗಂಟೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿoದ ತೆಂಕು ಮತ್ತು ಬಡಗು ತಿಟ್ಟುಗಳ ಕಾಲಾ ವೈಭವವನ್ನು ಒಟ್ಟುಗೂಡಿಸುವ ವಿಶೇಷ ಕಾರ್ಯಕ್ರಮ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿದೆ. ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಸತೀಶ್ ಶೆಟ್ಟಿ ಪಟ್ಲ ಮತ್ತು ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ ಭಾಗವತಿಕೆ ಪ್ರಮುಖ ಆಕರ್ಷಣೆಯಾಗಲಿದೆ. ಸಂಜೆ ಗಂಟೆ 6 ಕ್ಕೆ ಧರ್ಮ ಸಭೆ ನಡೆಯಲಿದ್ದು, ರಾತ್ರಿ ಗಂಟೆ 8 ರಿಂದ ಖ್ಯಾತ ಸಂಗೀತ ಕಲಾವಿದ ಡಾ. ವಿದ್ಯಾಭೂಷಣ್ ಮತ್ತು ಅವರ ಪುತ್ರಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ರವೀಶ ಪಡುಮಲೆ ಅವರು ತಿಳಿಸಿದ್ದಾರೆ.




























