ರಾಮಕುಂಜ: ಇಲ್ಲಿನ ಕಾಜರುಕ್ಕು ದಿ| ವಿಶ್ವನಾಥ ಪೂಜಾರಿಯವರ ಪುತ್ರ, ಕೆಸಿಡಿಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸ ಮಾಡುತ್ತಿದ್ದ ಸಚಿನ್ (33ವ.) ಅವರು ಸೆ.22ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಾಜರುಕ್ಕು ಎಂಬಲ್ಲಿ ಬೈಕ್ ಸರ್ವಿಸ್ ಸ್ಟೇಷನ್ ಹೊಂದಿದ್ದ ಸಚಿನ್ ಅದನ್ನು ಬಿಟ್ಟು ಕಳೆದ ಒಂದೂವರೇ ವರ್ಷದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮಂಗಳೂರು ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಸೆ.22ರಂದು ಮಧ್ಯಾಹ್ನ 1.30ರ ವೇಳೆಗೆ ಮನೆಗೆ ಬಂದು ಊಟಮಾಡಿ ಮಲಗಿದ್ದ ಸಚಿನ್‌ರನ್ನು ಅವರ ತಾಯಿ ಮಧ್ಯಾಹ್ನ 3 ಗಂಟೆ ವೇಳೆಗೆ ಎಬ್ಬಿಸಲು ಹೋದಾಗ ಸಚಿನ್ ಜೋರಾಗಿ ಉಸಿರಾಟ ನಡೆಸುತ್ತಿರುವುದನ್ನು ಕಂಡು ಇನ್ನೋರ್ವ ಪುತ್ರ ಚರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಚರಣ್ ಅವರು ಮನೆಗೆ ಬಂದಾಗ ಸಚಿನ್ ಉಸಿರಾಟ ನಡೆಸಲು ಕಷ್ಟಪಡುತ್ತಿರುವುದನ್ನು ಗಮನಿಸಿ ಪರಿಚಯದ ಪ್ರಶಾಂತ್ ಅವರ ಕಾರಿನಲ್ಲಿ ಚಿಕಿತ್ಸೆಗೆ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆಕರೆತಂದಿದ್ದು ಅಲ್ಲಿ ಮಧ್ಯಾಹ್ನ 3.10ರ ವೇಳೆಗೆ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸಚಿನ್ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಬಳಿಕ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಚಿನ್ ಹೃದಯಘಾತದಿಂದ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಈತನ ಮರಣದಲ್ಲಿ ಬೇರೆ ಸಂಶಯ ಇರುವುದಿಲ್ಲ ಎಂದು ಮೃತನ ಅಣ್ಣ
ಚರಣ್ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಸಚಿನ್ ತಾಯಿ, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.


























