ಉಪ್ಪಿನಂಗಡಿ: ಆಟೋ ರಿಕ್ಷಾ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಪಾತೂರು ಗ್ರಾಮದ ಸೀಂತೂರು ನಿವಾಸಿ ಯತಿರಾಜ್ (19) ಹಾಗೂ ಬಿಳಿನೆಲೆಯ ಬಿಳಿನೆಲೆಬೈಲು ನಿವಾಸಿ ಸಂತೋಷ್ (18) ಬಂಧಿತರು.
ನಟ್ಟಿಬೈಲ್ ನಿವಾಸಿ ನವೀನ್ ಎಂಬವರು ತನ್ನ ಮನೆಯ ಶೆಡ್ ನಲ್ಲಿ ಜೂ.18 ರಂದು ತನ್ನ ರಿಕ್ಷಾವನ್ನು ನಿಲ್ಲಿಸಿದ್ದು, ಅದು ಜೂ.19ರಂದು ಬೆಳಗ್ಗೆ ನೋಡುವಾಗ ಕಳವಾಗಿತ್ತು. ಎರಡ್ಮೂರು ದಿನಗಳ ಬಳಿಕ ಈ ರಿಕ್ಷಾ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಪತ್ತೆಯಾಗಿದ್ದು, ಅದನ್ನು ಹಿಡಿದು ಪೊಲೀಸರಿಗೆ ನೀಡಲಾಗಿತ್ತು. ಆ ಸಂದರ್ಭ ಅದನ್ನು ಚಲಾಯಿಸಿಕೊಂಡು ಬಂದವ ಈ ರಿಕ್ಷಾವನ್ನು ತನ್ನ ಬಿಳಿನೆಲೆಯ ಗೆಳೆಯನಿಂದ ಪಡೆದುಕೊಂಡು ಆಸ್ಪತ್ರೆಗೆ ಬಂದಿದ್ದೆ ಎಂದಿದ್ದ. ಈ ಮಾಹಿತಿಯನ್ನಾಧರಿಸಿ ಪೊಲೀಸರು ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.