ಉಪ್ಪಿನಂಗಡಿ:ಸಾರ್ವಜನಿಕ ಸೇವೆ ಒದಗಿಸುವಲ್ಲಿ ವಿಳಂಬ, ಭ್ರಷ್ಟಾಚಾರ, ಲಂಚದ ಬೇಡಿಕೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಅನುಚಿತ ವರ್ತನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿದ್ದ, ಪ್ರಸ್ತುತ ಆರ್ಯಾಪು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ಅಮಾನತುಗೊಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರವಾಡೆ ವಿನಾಯಕ ಕಾರಭಾರಿ ಅವರು ಸೆ.22ರಂದು ಆದೇಶ ಹೊರಡಿಸಿದ್ದು, ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಆದೇಶ ನೀಡಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ಭೇಟಿ ವೇಳೆ ದೂರು : ಸೆ.9ರಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತ ಪರಿಶೀಲನೆಗಾಗಿ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿದ್ದ ಸಂದರ್ಭ ಹಲವು ಸಾರ್ವಜನಿಕರು ಪಿಡಿಒ ವಿರುದ್ಧ ದೂರು ಸಲ್ಲಿಸಿದ್ದರು. ಸಾರ್ವಜನಿಕರಿಗೆ ನೀಡಬೇಕಾದ ಸೇವೆಗಳಲ್ಲಿ ವಿಳಂಬ, ಲಂಚದ ಬೇಡಿಕೆ, ಭ್ರಷ್ಟಾಚಾರ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಅನುಚಿತ ವರ್ತನೆ ಸೇರಿದಂತೆ ವಿವಿಧ ಆರೋಪಗಳನ್ನು ಮಾಡಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿದ ಅಹವಾಲುಗಳ ಪರಿಶೀಲನೆ ವೇಳೆ ಗ್ರಾಮ ಪಂಚಾಯತ್‌ನಲ್ಲಿ 18 ಮಂದಿಯ ವ್ಯಾಪಾರ ಪರವಾನಗಿ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಸೇರಿದಂತೆ ಹಲವು ಅಂಶಗಳು ವರದಿಯಲ್ಲಿ ಉಲ್ಲೇಖವಾಗಿದ್ದವು.
ಶೋಕಾಸ್ ನೋಟಿಸ್‌ಗೆ ಆರೋಪ ನಿರಾಕರಣೆ : ಸಾರ್ವಜನಿಕ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ, ಭ್ರಷ್ಟಾಚಾರ, ಲಂಚದ ಬೇಡಿಕೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಅನುಚಿತ ವರ್ತನೆ ಆರೋಪಗಳ ಕುರಿತು ಪಿಡಿಒಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿ-2021ರ ನಿಯಮ 3ರ ಉಲ್ಲಂಘನೆ ಕುರಿತು ವಿವರಣೆ ನೀಡುವಂತೆ ಸೂಚಿಸಲಾಗಿತ್ತು. ಶೋಕಾಸ್ ನೋಟಿಸ್‌ಗೆ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರು ಲಿಖಿತ ಸಮಜಾಯಿಷಿ ಸಲ್ಲಿಸಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು. ಆದರೆ ಅವರು ಸಲ್ಲಿಸಿದ ಸಮಜಾಯಿಷಿಯಲ್ಲಿ ಆರೋಪಗಳನ್ನು ನಿರಾಕರಿಸಲು ಸಮರ್ಪಕ ಹಾಗೂ ಸಮರ್ಥನೀಯ ದಾಖಲೆಗಳನ್ನು ಒದಗಿಸಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದೂರುಗಳಲ್ಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದು ಹಾಗೂ ಕರ್ತವ್ಯಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು-1957ರ ಅನ್ವಯ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

























