ಮಣಿಪಾಲ: ಕಂಬಳ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿದ್ದ, ಲೆಜೆಂಡ್ ಪಟ್ಟಕ್ಕೇರಿದ ನಂದಳಿಕೆ ಪಾಂಡು ಎಂಬ ಕೋಣವು ಸೋಮವಾರ (ಸೆ.28) ಮುಂಜಾನೆ ಅಸುನೀಗಿದೆ.
ವಯೋಸಹಜ ಅನಾರೋಗ್ಯದಿಂದ ಪಾಂಡು ಮೃತಪಟ್ಟಿದೆ.
ಅಪಾರ ಅಭಿಮಾನಿ ಬಳಗ ಹೊಂದಿದ್ದ ಪಾಂಡು ಕಂಬಳ ಕೂಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕೋಣ. ತನ್ನ ಓಟ, ಸ್ವಭಾವದಿಂದ ಅಭಿಮಾನಿಗಳಿಗೆ ಹತ್ತಿರವಾಗಿದ್ದ ಪಾಂಡು ಹಗ್ಗ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದ್ದ.
ಕಂಬಳ ದಿಗ್ಗಜ ಚೆನ್ನ, ಮೋಡೆ ಕೋಣಗಳೊಂದಿಗೆ ಪಾಂಡು ಜೊತೆಯಾಗಿ ಓಡಿ ಹೆಸರು ಮಾಡಿದ ಕೋಣ. ಖ್ಯಾತ ಮಾಜಿ ಓಟಗಾರ ನಕ್ರೆ ಜಯಕರ ಮಡಿವಾಳ ಅವರು ಪಾಂಡುವೊಂದಿಗೆ ಹಲವು ಪದಕಗಳಿಗೆ ಕೊರಳೊಡ್ಡಿದ್ದರು. ಓಟದ ಕರೆಯಲ್ಲಿ ಜಯಕರ ಮಡಿವಾಳರ ಸ್ವರಕ್ಕೆ ಉತ್ತಮ ಸ್ಪಂದನೆ ನೀಡಿ ಪಾಂಡು ಓಡುತ್ತಿದ್ದ ಕ್ಷಣವನ್ನು ಇಂದೂ ಕಂಬಳಾಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.
ಪಾಂಡು ಕೋಣದ ಓಟವನ್ನು ನೋಡಿದವರು ಹೇಳುವ ಮಾತು ಅದನ್ನು ಚೇಸ್ ಮಾಡುವುದು ಕಷ್ಟ ಎಂದು. ಅದು ಫೋರ್ಸ್ ನಲ್ಲಿ ಮಂಜೊಟ್ಟಿಗೆ ಹಾರುವ ರೀತಿ ನೋಡುವುದೇ ಚಂದ.
ಸುಮಾರು ಮೂರು ವರ್ಷದ ಹಿಂದೆ ಹೊಕ್ಕಾಡಿಗೋಳಿ ಕಂಬಳದಲ್ಲಿ ಪಾಂಡು ಕೊನೆಯ ಬಾರಿಗೆ ಮೆಡಲ್ ಗೆದ್ದುಕೊಂಡಿದ್ದ. ಬಳಿಕ ಶ್ರೀಕಾಂತ್ ಭಟ್ ಅವರ ಹಟ್ಟಿಯಲ್ಲಿ ನಿವೃತ್ತ ಜೀವನ ಕಳೆಯುತ್ತಿದ್ದ ಪಾಂಡು ಇಂದು ಕೊನೆಯುಸಿರು ಎಳೆದಿದೆ.


























