ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಗಿರಿಜಾ ಕಲ್ಯಾಣೋತ್ಸವ ಡಿ.12 ಮತ್ತು 13ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆ.27ರಂದು ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಗಿರಿಜಾ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಡಿ.12ರಂದು ಲಕ್ಷ ಬಿಲ್ವಾರ್ಚನೆ ಹಾಗೂ ಸಂಜೆ ಕೇಸರಿ ಸಂಗಮ ನಡೆಯಲಿದ್ದು, 11 ಮಂದಿ ಮಠಾಧೀಶರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಡಿ.13ರಂದು ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ ಹಾಗೂ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹವೂ ನಡೆಯಲಿದ್ದು, ಈಗಾಗಲೇ ಐದು ಜೋಡಿಗಳು ನೋಂದಾಯಿಸಿಕೊಂಡಿವೆ. ಎರಡು ದಿನಗಳಲ್ಲಿ ಸುಮಾರು 2 ಲಕ್ಷ ಮಂದಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಗಿರಿಜಾ ಕಲ್ಯಾಣೋತ್ಸವ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುಭದ್ರಾ ಕಲಾ ಮಂದಿರದಲ್ಲಿ ನಡೆದ ಗಿರಿಜಾ ಕಲ್ಯಾಣೋತ್ಸವದ ಪೂರ್ವಭಾವಿ ಸಭೆಯಲ್ಲಿ ದೊಡ್ಡ ಮಟ್ಟದಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಇಡೀ ಸಭಾಂಗಣವೇ ಜನರಿಂದ ತುಂಬಿ ತುಳುಕಿತ್ತು. ಆಸನಗಳು ಭರ್ತಿಯಾಗಿ ಸಭಾಂಗಣದ ಬದಿ ಹಾಗೂ ಹೊರಭಾಗದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿರುವುದು ಪೂರ್ವಭಾವಿ ಸಭೆಯಲ್ಲಿ ವಿಶೇಷವಾಗಿತ್ತು.



























