ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 17ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4’ ಕಾರ್ಯಕ್ರಮದ ಪೂರ್ವಭಾವಿಯಾಗಿ ಹುಲಿ ವೇಷ ತಂಡಗಳ ಪ್ರಮುಖರ ಸಭೆ ಬಿ.ಸಿ.ರೋಡ್‌ನ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ಆಯೋಜಿಸುವ ನಿಟ್ಟಿನಲ್ಲಿ ಹುಲಿ ವೇಷ ತಂಡಗಳ ಪ್ರಮುಖರೊಂದಿಗೆ ಕಾರ್ಯಕ್ರಮದ ರೂಪುರೇಷೆ, ಸ್ಪರ್ಧೆಯ ನಿಯಮಗಳು, ತಂಡಗಳ ಭಾಗವಹಿಸುವಿಕೆ ಹಾಗೂ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಶ್ರೀ ಸಹಜ್ ರೈ ಬಳಜ್ಜ, ಕಾರ್ಯಕ್ರಮದ ತೀರ್ಪುಗಾರರಾದ ಶ್ರೀ ಕದ್ರಿ ನವನೀತ ಶೆಟ್ಟಿ,ಟೈಗರ್ ಕ್ಯಾಂಪ್ ರಾಜ, ಪಿಲಿಗೊಬ್ಬು ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ಶ್ರೀ ರತನ್ ರೈ ಕುಂಬ್ರ, ಉಪಾಧ್ಯಕ್ಷರಾದ ಶ್ರೀ ಪವನ್ ಶೆಟ್ಟಿ ಕಂಬಳತ್ತಡ್ಡ, ಕಾರ್ಯದರ್ಶಿಗಳಾದ ಶ್ರೀ ಧನುಷ್ ಹೊಸಮನೆ ಹಾಗೂ ಶ್ರೀ ಪ್ರಜ್ವಲ್ ಎಂ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹುಲಿ ವೇಷ ಕಲೆಯ ವೈಭವವನ್ನು ಉಳಿಸಿ ಬೆಳೆಸುವ ಹಾಗೂ ಯುವಜನರಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ನಡೆಯಲಿರುವ ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.



























