ಪುತ್ತೂರು: ಇಲ್ಲಿನ ಕೊಂಬೆಟ್ಟು ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿರುವ ಶ್ರೀವತ್ಸ ಎಂಬವರು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಬೆಳ್ಳಾರೆಯಲ್ಲಿ ವಿನಾಯಕ ಸ್ಪೋರ್ಟ್ಸ್ ಅಂಗಡಿ ನಡೆಸುತ್ತಿರುವ ವ್ಯಕ್ತಿಯ 17 ವರ್ಷದ ಮಗ ಶ್ರೀವತ್ಸ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.
ಅ.22ರಂದು ಬೆಳಿಗ್ಗೆ 6.50ರ ಬಸ್ಸಿನಲ್ಲಿ ಕಾಲೇಜಿಗೆ ಹೋಗುವುದಾಗಿ ಹೇಳಿ ಸಮವಸ್ತ್ರ ಧರಿಸಿ ಮನೆಯಿಂದ ಹೊರಟಿದ್ದ ಮಗ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈ ಕುರಿತು ಸಂಬಂಧಿಕರಲ್ಲಿ ಹಾಗೂ ಮಗನ ಸ್ನೇಹಿತರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಮಗ ಸ್ನೇಹಿತರ ಮನೆಗೆ ಹೋಗಿರಬಹುದೆಂದು ಭಾವಿಸಿ ಕಾಯುತ್ತಿದ್ದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಆತನ ತಂದೆ ಎಡಮಂಗಲ ಪೊಯ್ಯತ್ತೂರು ನಿವಾಸಿ ನಾರಾಯಣ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುಮಾರು 15 ದಿನಗಳ ಹಿಂದೆ ಅಜ್ಜಿ ಕಮಲ ಅವರ ಖಾತೆಯಿಂದ ಹಣ ತೆಗೆದಿರುವ ವಿಚಾರವಾಗಿ ಮನೆಯಲ್ಲಿ ಶ್ರೀವತ್ಸನಲ್ಲಿ ವಿಚಾರಿಸಲಾಗಿದ್ದು,ಈ ಸಂದರ್ಭದಲ್ಲಿ ಆತ ಬೇಸರಗೊಂಡಿದ್ದರೆನ್ನಲಾಗಿದೆ.
ಅಪ್ರಾಪ್ತ ವಯಸ್ಕನಾಗಿರುವ ಮಗ ಕಾಣೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಂದೆ ನಾರಾಯಣ ಪೂಜಾರಿಯವರು, ಮಗನನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.


























