ಕುಂದಾಪುರ: ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 28 ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಬೆಳಿಗ್ಗೆ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಬಳಿ ನಡೆದಿದೆ.
ಕುಂದಾಪುರದಿಂದ ಬೈಂದೂರಿನತ್ತ ತೆರಳುತ್ತಿದ್ದ ಶ್ರೀ ದುರ್ಗಾಂಬ ಬಸ್ಸಿಗೆ, ಮಂತ್ರಾಲಯದಿಂದ ಮಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಗಣೇಶ್ ಬಸ್ ಎದುರಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಶ್ರೀ ದುರ್ಗಾಂಬ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಿಯಂತ್ರಣ ತಪ್ಪಿದ ಬಸ್ ತಿರುಗಿ ಹಿಂಬದಿಯಿಂದ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಢಿಕ್ಕಿಯಾಗಿದೆ.
ಅಪಘಾತದಲ್ಲಿ ಎರಡೂ ಬಸ್ಸುಗಳ ಪ್ರಯಾಣಿಕರು ಹಾಗೂ ಗೂಡ್ಸ್ ವಾಹನದ ಚಾಲಕ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇತರ ಗಾಯಾಳುಗಳಿಗೆ ಕುಂದಾಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳ ಸಂಪೂರ್ಣ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

























