ಮುಕ್ಕೂರು : ಮುಕ್ಕೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ರವಿವಾರ ಸಂಜೆ ಮುಕ್ಕೂರು ವಠಾರದಲ್ಲಿ ನಡೆಯಿತು.
ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಭರತ್ ಬೊಣ್ಯಕುಕ್ಕು, ಪ್ರಧಾನ ಕಾರ್ಯದರ್ಶಿಯಾಗಿ ಸೃಜನ್ ಅಡ್ಯತಕಂಡ ಆಯ್ಕೆಯಾದರು.
ಸಂಘದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹಾಗೂ ಹಿಂದಿನ ಅವಧಿಯ ಅಧ್ಯಕ್ಷರಾದ ರವೀಂದ್ರ ಅನವುಗುಂಡಿ ಅವರ ಅವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳು ಆಯ್ಕೆ ನಡೆಯಿತು.
ಸಮಿತಿಯ ಉಪಾಧ್ಯಕ್ಷರಾಗಿ ಕುಸುಮಾಧರ ಪೂಜಾರಿ ಮುಕ್ಕೂರು, ಜತೆ ಕಾರ್ಯದರ್ಶಿಯಾಗಿ ಪ್ರವೀಣ್ ಬಿ., ಕೋಶಾಧಿಕಾರಿಯಾಗಿ ಪ್ರಶಾಂತ ರೈ ಬೋಳಕುಮೇರು ಆಯ್ಕೆಯಾದರು. ಇದೇ ಸಂದರ್ಭದಲ್ಲಿ 25 ಮಂದಿ ಗೌರವ ಸಲಹೆಗಾರ ಆಯ್ಕೆಗೆ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆ ಎರಡು ವರ್ಷದ ಅವಧಿಗೆ ನಿಗದಿಯಾಗಿದ್ದ ಪದಾಧಿಕಾರಿಗಳ ಅವಧಿಯನ್ನು ಮೂರು ವರ್ಷಕ್ಕೆ ವಿಸ್ತರಿಸಿ ನಿರ್ಣಯ ಕೈಗೊಳ್ಳಲಾಯಿತು.
ನೂತನ ಅಧ್ಯಕ್ಷ ಭರತ್ ಬೊಣ್ಯಕುಕ್ಕು ಮಾತನಾಡಿ, ಸಂಘಕ್ಕೆ ಸೇರಿದ ಕೆಲವೇ ಸಮಯದಲ್ಲಿ ಮಹತ್ವದ ಜವಾಬ್ದಾರಿ ನನಗೆ ಸಿಕ್ಕಿದೆ. ಇಂತಹ ಗುರುತರ ಅವಕಾಶ ನೀಡಿದ ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ವ ಸದಸ್ಯರ ಸಹಕಾರದಿಂದ ಊರವರ ನಿರೀಕ್ಷೆಯಂತೆ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಿರ್ಗಮಿತ ಅಧ್ಯಕ್ಷ ರವೀಂದ್ರ ಅನವುಗುಂಡಿ ಮಾತನಾಡಿ, ಕಳೆದ ಎರಡು ವರ್ಷದ ನನಗೆ ಸಿಕ್ಕ ಅವಕಾಶವನ್ನು ಎಲ್ಲರ ಸಹಕಾರದಿಂದ ನಿಭಾಯಿಸಿದ್ದೇನೆ. ಸಂಘದ ಸದಸ್ಯರು, ಊರವರು ಉತ್ತಮ ಸಹಕಾರ ನೀಡಿದ್ದಾರೆ. ಇನ್ನೂ ಮುಂದೆಯೂ ಸಂಘದ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುವೆ ಎಂದರು.
ಸಂಘದ ಸದಸ್ಯ ಶ್ರೀಧರ ಕೊಂಡೆಪ್ಪಾಡಿ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು. ಸಂಘದ ಸದಸ್ಯ ತೇಜಸ್ವಿತ್ ಅಡ್ಯತಕಂಡ ಸಭೆ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


























