ತುಮಕೂರು: ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಜವರಾಯನ ಅಟ್ಟಹಾಸ ಮೆರೆದಿದ್ದು, ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ಶಿರಾ ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ.
ಮೃತ ಯುವತಿಯರನ್ನು ನಿಸರ್ಗ (20) ಹಾಗೂ ರೂಪಾ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐದಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಇಂದು ಬೆಳಗಿನ ಜಾವ 5 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಬಿಜಾಪುರದಿಂದ ಡಿಸೈರ್ ಕಾರಿನಲ್ಲಿ ಮೂವರು ಯುವತಿಯರು ಹಾಗೂ ಚಾಲಕ ಸೇರಿ ನಾಲ್ವರು ಬೆಂಗಳೂರಿನತ್ತ ತೆರಳುತ್ತಿದ್ದರು. ಬಿ-ಫಾರ್ಮಾ ಮುಗಿಸಿದ್ದ ಯುವತಿಯರು ಜಾಬ್ ಇಂಟರ್ವ್ಯೂಗೆಂದು ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಚಾಲಕ ಪವನ್ ನಿಯಂತ್ರಣ ತಪ್ಪಿ, ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾರಿ ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಟಾಟಾ ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ಸ್ಥಳದಲ್ಲೇ ನಿಸರ್ಗ ಹಾಗೂ ರೂಪಾ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ಮತ್ತೋರ್ವ ಯುವತಿ ಹಾಗೂ ಚಾಲಕ ಪವನ್ಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಟಾಟಾ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಶಿರಾ ಡಿವೈಎಸ್ಪಿ, ಶಿರಾ ಗ್ರಾಮಾಂತರ ಸಿಪಿಐ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


























