ವಿಟ್ಲ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ನಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಅಗತ್ಯ ದಾಖಲೆಗಳು ಕಳವಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಸಮೀಪದ ಗ್ರಾಮದ ಪ್ರೇಮಾ (44) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಪೆರ್ಲದಲ್ಲಿರುವ ತಾಯಿಯ ಮನೆಯಿಂದ ವಿಟ್ಲಕ್ಕೆ ಬಂದು, ಅಲ್ಲಿಂದ ಮಂಗಳೂರಿಗೆ ತೆರಳುವ ಬಸ್ಸನ್ನು ಹತ್ತಿ ಕುಳಿತಿದ್ದರು. ಈ ಸಂದರ್ಭದಲ್ಲಿ ಅವರ ಬ್ಯಾಗ್ ತೆರೆದುಕೊಂಡಿದ್ದು, ಅದರಲ್ಲಿದ್ದ ಸುಮಾರು 64 ಗ್ರಾಂ ತೂಕದ ಚಿನ್ನಾಭರಣ, 3,000 ರೂ. ನಗದು, ಎಟಿಎಂ ಕಾರ್ಡ್, ಪಾನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳು ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


























