ಪುತ್ತೂರು: ಅರುಣ ಸಾರಥಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸಚಿನ್ ಒಳತ್ತಡ್ಕ ಅವರನ್ನು ಬಿಎಂಎಸ್ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಈ ಕುರಿತು ಒಳತ್ತಡ್ಕ ಬಿಎಂಎಸ್ ಸಂಘದ ವತಿಯಿಂದ ಸಚಿನ್ ಅವರಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸಲಾಗಿದೆ. ನ.7ರಂದು ನಡೆದ ಸಂಘದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಈ ಕ್ರಮ ಜರುಗಿಸಲಾಗಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಬಿಎಂಎಸ್ ಸಂಘದ ನಿಯಮಾವಳಿಗಳ ಪ್ರಕಾರ ಮತ್ತೊಂದು ಚಾಲಕ-ಮಾಲಕರ ಸಂಘದ ಪದಾಧಿಕಾರಿಯಾಗುವುದು ಹಾಗೂ ಅಂತಹ ಸಂಘದ ವೇದಿಕೆಯನ್ನು ಹಂಚಿಕೊಳ್ಳುವುದು ನಿಯಮ ಉಲ್ಲಂಘನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್ ಒಳತ್ತಡ್ಕ, “ಅರುಣ ಸಾರಥಿ ನೋಂದಾಯಿತ ಸಂಘಟನೆಯಲ್ಲ. ಬಡ ಆಟೋ ಚಾಲಕರ ಸಹಕಾರ ಮತ್ತು ಸೇವೆಯ ಉದ್ದೇಶದಿಂದ ಆರಂಭಿಸಿರುವ ಸಂಘಟನೆಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಸಹಿಸದೆ ರಾಜಕೀಯ ಉದ್ದೇಶದಿಂದ ನನ್ನನ್ನು ಬಿಎಂಎಸ್ ಹುದ್ದೆಯಿಂದ ವಜಾಗೊಳಿಸಲಾಗಿದೆ. ಆದರೆ ಈ ಬೆಳವಣಿಗೆ ಅರುಣ ಸಾರಥಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ.


























