ಪುತ್ತೂರು: ಕಳೆದ 14 ವರ್ಷಗಳಿಂದ ಪ್ರತೀ ದೀಪಾವಳಿಯಂದು ಸ್ವಂತ ಉದ್ಯಮದ ಸಂಪಾದನೆಯ ಒಂದಷ್ಟು ಪಾಲನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ. ಇದನ್ನು ಅಹಂಕಾರದಿಂದ ಮಾಡುತ್ತಿಲ್ಲ. ದೇವರು ಎಷ್ಟು ವರ್ಷ ಈ ಸೇವೆ ಮಾಡಲು ಶಕ್ತಿ ನೀಡುತ್ತಾನೋ ಅಷ್ಟು ವರ್ಷ ಮುಂದುವರಿಸುತ್ತೇನೆ. ಅಶೋಕ ಜನಮನ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸುವುದೇ ನನಗೆ ನೀವು ನೀಡುವ ದೊಡ್ಡ ಶಕ್ತಿ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನ.22ರಂದು ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ವಿವಿಧ ಸಮಿತಿಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ಆರಂಭವಾಗಲಿದ್ದು, ಸಾರ್ವಜನಿಕರೆಲ್ಲರೂ ನಮ್ಮ ಅತಿಥಿಗಳಾಗಿರುತ್ತಾರೆ. ಬೆಳಿಗ್ಗೆ ಬರುವವರಿಗೆ ಉಪಾಹಾರ, ಮಧ್ಯಾಹ್ನ ಆಗಮಿಸುವವರಿಗೆ ಊಟ ಹಾಗೂ ಸಂಜೆ ಬರುವವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಎಲ್ಲರಿಗೂ ಉಡುಗೊರೆ ವಿತರಿಸಲಾಗುವುದು. ನ.8ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಳೆಯ ಕಾರಣದಿಂದ ಮುಂದೂಡಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಂದು ಲಕ್ಷ ಜನರ ನಿರೀಕ್ಷೆ :ಅಶೋಕ ಜನಮನ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಪ್ರತಿಯೊಬ್ಬರಿಗೂ ಊಟ, ಉಪಾಹಾರದ ಜೊತೆಗೆ ತಟ್ಟೆ, ಟವೆಲ್, ಬೆಡ್‌ಶೀಟ್ ಅಥವಾ ಸೀರೆ ಇವುಗಳಲ್ಲಿ ಯಾವುದಾದರೊಂದು ಉಡುಗೊರೆಯನ್ನು ವಿತರಿಸಲಾಗುವುದು. ಉತ್ತಮ ಗುಣಮಟ್ಟದ ಉಡುಗೊರೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಟ್ರಸ್ಟ್ ಸದಸ್ಯರು ಗ್ರಾಮಮಟ್ಟದಲ್ಲಿ ತೆರಳಿ ಸಾರ್ವಜನಿಕರಿಗೆ ಆಮಂತ್ರಣ ನೀಡುತ್ತಿದ್ದಾರೆ. ಆಮಂತ್ರಣ ತಲುಪದವರು ಇದನ್ನೇ ಆಹ್ವಾನವೆಂದು ಪರಿಗಣಿಸಿ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಶಾಸಕರು ತಿಳಿಸಿದರು.
ಅಪಪ್ರಚಾರಕ್ಕೆ ಕಿವಿಗೊಡಬೇಡಿ : ಬಡವರಿಗೆ ನೆರವು ನೀಡುವ ಕಾರ್ಯವನ್ನು ಸಹಿಸದ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ವರ್ಷದ ಕಾರ್ಯಕ್ರಮದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಬಡವರಿಗೆ ಸಹಾಯ ಮಾಡುವವರ ಬಗ್ಗೆ ಅಪಪ್ರಚಾರ ಮಾಡುವ ಬದಲು, ಟೀಕಾಕಾರರಿಗೂ ಬಡವರಿಗೆ ನೆರವು ನೀಡುವ ಮನಸ್ಸು ಮತ್ತು ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹೇಳಿದರು.
ಸಿದ್ಧತೆ ಅಂತಿಮ ಹಂತದಲ್ಲಿ: ಸುದೇಶ್ ಶೆಟ್ಟಿ : ಕಾರ್ಯಕ್ರಮಕ್ಕಾಗಿ ಚಪ್ಪರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಊಟ, ಉಡುಗೊರೆ ವಿತರಣೆ, ಹಿರಿಯ ನಾಗರಿಕರು ಹಾಗೂ ಅಶಕ್ತರಿಗೆ ವಿಶೇಷ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗ್ರಾಮಮಟ್ಟದಲ್ಲಿ ಆಮಂತ್ರಣ ನೀಡುವ ಕಾರ್ಯ ಹಾಗೂ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಎಷ್ಟೇ ಜನರು ಬಂದರೂ ಅಚ್ಚುಕಟ್ಟಾಗಿ ನಿರ್ವಹಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಟ್ರಸ್ಟ್ ಪ್ರಮುಖರಾದ ಸುಮಾ ಅಶೋಕ್ ರೈ, ಮಹಮ್ಮದ್ ಬಡಗನ್ನೂರು, ಡಾ. ರಾಜಾರಾಂ ಕೆ.ಬಿ., ಮುರಳೀಧರ್ ರೈ ಮಠoತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಯು.ಟಿ. ತೌಸೀಫ್ ಉಪ್ಪಿನಂಗಡಿ, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಿತೇಶ್ ಶೆಟ್ಟಿ ಪುತ್ತೂರು, ನಿಹಾಲ್ ಪಿ. ಶೆಟ್ಟಿ ಸಾಮೆತ್ತಡ್ಕ, ಯೋಗೀಶ್ ಸಾಮಾನಿ, ರಾಧಾಕೃಷ್ಣ ನಾಯ್ಕ್, ರಾಮಣ್ಣ ಪಿಲಿಂಜ ಉಪ್ಪಿನಂಗಡಿ ಸೇರಿದಂತೆ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.


























