ಪುತ್ತೂರು : 2016 ರಲ್ಲಿ ನಡೆದ ಅಪ್ರಾಪ್ತೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಆರೋಪಿಗೆ ಪುತ್ತೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ತ ನ್ಯಾಯಾಲಯವೂ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಂತ್ರಸ್ತ ಬಾಲಕಿಯೂ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಶಾಫಿ ಆಡ್ಕ ಯಾನೆ ಇಬ್ರಾಹಿಂ ಇ.ಎ. ಎಂಬಾತನನ್ನು ತಪಿತಸ್ಥ ಎಂದು ಪರಿಗಣಿಸಿ ನ್ಯಾಯಾಲಯವೂ ತೀರ್ಪು ನೀಡಿದೆ.
ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾರವರು ಆರೋಪಿಯು ಬಾಲಕಿಯ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಅವಳ ಕೈ ಹಿಡಿದು ಎಳೆದು ಅವಮಾನ ಮಾಡಿ ಅವಳ ಮೇಲೆ ಲೈಂಗಿಕ ಕಿರುಕುಳವೆಸಗಿದ ಬಗ್ಗೆ ಭಾ.ದಂ.ಸಂ. ಕಲಂ 354, 448 ಹಾಗೂ ಪೋ ಕಾಯ್ದೆ ಕಲಂ 8 ಮತ್ತು 12 ರಡಿ ತಪ್ಪಿತಸ್ಥನೆಂದು ಜು 5 ರಂದು ತೀರ್ಪು ನೀಡಿದ್ದಾರೆ.
ಶಿಕ್ಷೆಯ ಪ್ರಮಾಣ:
ಆರೋಪಿಗೆ ಭಾ.ದಂ.ಸಂ. ಕಲಂ 354 ರಡಿ ಅಪರಾಧಕ್ಕೆ 1 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 5,000/- ದಂಡ, ದಂಡ ತರಲು ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸ್ವರೂಪದ ಶಿಕ್ಷೆ,
ಭಾ.ದಂ.ಸಂ. ಕಲಂ 448 ರಡಿ ಅಪರಾಧಕ್ಕೆ 6 ತಿಂಗಳು ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 1,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸ್ವರೂಪದ ಶಿಕ್ಷೆ
ಕಲಂ 7, 8, 11, 12 ಸೋ ಕಾಯ್ದೆಯಡಿ ಅಪರಾಧಕ್ಕೆ 3 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 10,000/- ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.
ಒಟ್ಟು ದಂಡದ ಮೊತ್ತ ರೂ. 16,000/- ದಲ್ಲಿ ರೂ. 15,000/- ವನ್ನು ಬಾಲಕಿಗೆ ನೀಡಲು ಮಾನ್ಯ ನ್ಯಾಯಾಲಯವು ಆದೇಶಿಸಿದೆ. ದಂ.ಪ್ರ.ಸಂ. ಕಲಂ 357(ಎ) ಹಾಗೂ ಪೋಕ್ಸೋ ಕಾಯ್ದೆ ಕಲಂ 33(8) ಜೊತೆಗೆ ನಿಯಮ 7 ರಡಿ ರೂ.15,000/- ಪರಿಹಾರ ನೀಡಲು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶವಿತ್ತಿರುತ್ತದೆ.
ಪ್ರಕರಣದ ವಿವರ:
ಪ್ರಕರಣದ ಅಪರಾಧಿಯಾಗಿರುವ ಶಾಫಿ ಆಡ್ಕ ಯಾನೆ ಇಬ್ರಾಹಿಂ ಇ.ಎ. ಸಂತ್ರಸ್ತ ಅಪ್ರಾಪ್ತೆ ಮನೆಯಲ್ಲಿ ಒಬ್ಬಳೇ ಇರುವುದನ್ನು ಖಾತ್ರಿ ಪಡಿಸಿಕೊಂಡು ಫೆ 10, 2016 ಆಕೆಯ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲು ತಟ್ಟಿದ್ದಾನೆ. ಬಾಲಕಿಯು ಏನೆಂದು ವಿಚಾರಿಸಲು ಬಾಗಿಲು ತೆರೆದಾಗ ಆಪಾದಿತನು ಅಪ್ರಾಪ್ತ ಬಾಲಕಿಯ ಕೈ ಹಿಡಿದು ಎಳೆದು “ನನ್ನೊಂದಿಗೆ ಬಾ ಮಜಾ ಮಾಡೋಣ” ಎಂದು ಕರೆದಿದ್ದಾನೆ . ಈ ಸಮಯದಲ್ಲಿ ಬಾಲಕಿಯು ಆಪಾದಿತನಿಂದ ಬಿಡಿಸಿಕೊಂಡು ಮನೆಯ ಒಳಗಡೆ ಹೋಗಿ ಚಿಲಕ ಹಾಕಿಕೊಂಡಿದ್ದು, ನಂತರ ಬೊಬ್ಬೆ ಹೊಡೆದಿದ್ದಾಳೆ.ಈ ಸಂದರ್ಭ ಶಾಫಿ ಅಲ್ಲಿಂದ ರಿಕ್ಷಾದಲ್ಲಿ ಪರಾರಿಯಾಗಿದ್ದಾನೆ.
ಆರೋಪಿಯೂ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸುವ ಉದ್ದೇಶದಿಂದ ಮಾನಭಂಗಕ್ಕೆ ಯತ್ನಿಸಿ ಅಪರಾಧ ಎಸಗಿದ್ದಾನೆ ಎಂದು ಆರೋಪಿಸಿ ಬಾಲಕಿಯು ಪು ತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು. ದೂರಿನ ಅನ್ವಯ ಪೊಲೀಸರು ಆರೋಪಿಯ ವಿರುದ್ಧ ಭಾ.ದಂ.ಸಂ. ಕಲಂ 448, 354 ಮತ್ತು ಪೋಕ್ಲೋ ಕಾಯ್ದೆ ಕಲಂ 12 ರಡಿ ಪ್ರಥಮ ವರ್ತಮಾನ ದಾಖಲಿಸಿದರು .ಬಳಿಕ ಅಂದಿನ ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ. ರವಿ ಬಿ.ಎಸ್. ರವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಿಯ ವಿರುದ್ಧ ಪೋಕ್ಲೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು ಹಾಗೂ ನ್ಯಾಯಾಲಯದಲ್ಲಿ ವಿವರವಾದ ಸಾಕ್ಷ್ಯ ನುಡಿದಿದ್ದರು. ಸರ್ಕಾರದ ಪರವಾಗಿ ಒಟ್ಟು 11 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ.
ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.