ಇಡುಕ್ಕಿ : ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭೀಕರ ಘಟನೆಯೊಂದು ವರದಿಯಾಗಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಯುವ ವಿಭಾಗದ ನಾಯಕನೋರ್ವನನ್ನು ಆರು ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಇಡುಕ್ಕಿ ಜಿಲ್ಲೆಯ ನಿವಾಸಿ ಅರ್ಜುನ್ (22) ಎಂದು ಗುರುತಿಸಲಾಗಿದೆ.
ಬಾಲಕಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಆಕೆ ದೀರ್ಘಕಾಲದವರೆಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ತಿಳಿದುಬಂತು. ಇದರ ಬೆನ್ನಲ್ಲೇ, ಈ ಪ್ರಕರಣವು ಕೊಲೆ ಪ್ರಕರಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆ ನಡೆಸಿದ್ದರು.
ಆರೋಪಿ ಕಳೆದ ಮೂರು ವರ್ಷಗಳಿಂದ ಬಾಲಕಿಗೆ ಸ್ವೀಟ್ ಕೊಡಿಸುವ ಅಮಿಷವೊಡ್ದಿ ಆಕೆಯನ್ನು ಭೇಟಿ ಮಾಡಿ ಅತ್ಯಾಚಾರವೆಸಗುತ್ತಿದ್ದ . ಅದೇ ರೀತಿ ಜೂನ್ 30ರಂದು ಆಕೆಯ ಮನೆಯ ಕೋಣೆಯೊಳಗೆ ಹೋದ ಆತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆ ವೇಳೆ ಬಾಲಕಿ ಮೂರ್ಛೆ ಹೋಗಿದ್ದಾಳೆ. ಆಕೆ ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ ಆತ ಆಕೆಯ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ್ದ.
ಘಟನೆ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, “ಜೂನ್ 30 ರಂದು ಸಂಭವಿಸಿದ ಘಟನೆ ಆಕಸ್ಮಿಕ ಸಾವು ಎಂದು ವರದಿಯಾಗಿತ್ತು. ಬಾಲಕಿ ಆಟವಾಡುತ್ತಿದ್ದ ಶಾಲು ಆಕಸ್ಮಿಕವಾಗಿ ಅವಳ ಕುತ್ತಿಗೆಗೆ ಸಿಲುಕಿಕೊಂಡಿದೆ ಎಂದು ನಮಗೆ ತಿಳಿಸಲಾಯಿತು. ಬಾಲಕಿಯ ಮೃತದೇಹವನ್ನು ಆಕೆಯ ಅಪ್ರಾಪ್ತ ಸಹೋದರ ಮೊದಲು ಮನೆಯ ಕೋಣೆಯಲ್ಲಿ ಶಾಲು ಬಿಗಿದ ಸ್ಥಿತಿಯಲ್ಲಿ ನೋಡಿದ್ದ. ಘಟನೆ ನಡೆದಾಗ ಬಾಲಕಿ ಪೋಷಕರು ಕೆಲಸದ ಕಾರಣದಿಂದ ಮನೆಯಿಂದ ಹೊರಹೋಗಿದ್ದರು. ಆದರೆ ಮರಣೋತ್ತರ ವರದಿ ನಮ್ಮನ್ನು ಈ ಪ್ರಕರಣದ ಕೊಲೆ ಕೇಸ್ ನಲ್ಲಿ ನೋಡುವಂತೆ ಮಾಡಿತು. ಇನ್ನು ಅತ್ತ ಕಡೆ ಆರೋಪಿ ಅರ್ಜುನ್ ಘಟನೆಯ ನಂತರ ಭಯಭೀತನಾಗಿದ್ದು ಹೀಗಾಗಿ ಬಾಲಕಿಯ ಆಕಸ್ಮಿಕ ಸಾವಿನ ವದಂತಿಯನ್ನು ಹರಡಿದ್ದ. ಆದಾಗ್ಯೂ, ಶವಪರೀಕ್ಷೆಯ ವರದಿ ಹಾಗೂ ವಿವರವಾದ ತನಿಖೆ ನಾಲ್ವರು ಶಂಕಿತರ ಬಂಧನಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಅರ್ಜುನ್ ಕೈವಾಡ ಬಯಲಾಯಿತು” ಎಂದು ವಿವರಿಸಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಯಲ್ಲಿ ಸಕ್ರಿಯನಾಗಿದ್ದಅರ್ಜುನ್ ,ಸ್ಥಳೀಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಂಕ್ರಾಮಿಕರೋಗದ ಸಮಯದಲ್ಲೂ ವಿಶೇಷವಾಗಿ ಸ್ವಯಂಸೇವಕ ಕೆಲಸ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.