ಮುಂಬೈ: ಹಿಂದಿ ಚಿತ್ರರಂಗದ ಲೆಜೆಂಡರಿ ನಟ ದಿಲೀಪ್ ಕುಮಾರ್(98) ಅವರು ಇಂದು ನಿಧನರಾದರು. ಕೆಲವೇ ದಿನಗಳ ಹಿಂದೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲೀಪ್ ಕುಮಾರ್ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.

ಜೂ.30ರಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ದಿಲೀಪ್ ಕುಮಾರ್ ನಿಧನಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು, ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. 1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್ ಕುಮಾರ್ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಕೊಹಿನೂರ್, ಮುಘಲ್-ಏ-ಆಜಮ್, ಶಕ್ತಿ, ನಯಾ ದೌರ್, ರಾಮ್ ಔರ್ ಶ್ಯಾಮ್ ಮುಂತಾದ ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ದಿಲೀಪ್ ಕುಮಾರ್ ನಟಿಸಿದ ಕೊನೇ ಸಿನಿಮಾ ‘ಖಿಲಾ’ 1998ರಲ್ಲಿ ತೆರೆಕಂಡಿತು. ಆ ನಂತರ ಅವರು ಯಾವುದೇ ಚಿತ್ರದಲ್ಲೂ ಬಣ್ಣ ಹಚ್ಚಲಿಲ್ಲ.