ಪುತ್ತೂರು: ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿನ ದೊಡ್ಡಡ್ಕದ ಅಭಿಮಾನಿಯೋರ್ವರ ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಯೋಗಿ ಪುತ್ತೂರಿಗೆ ಬಂದ್ರಾ.. ? ಯಾರಪ್ಪಾ ಅವರು ಯೋಗಿಯ ನಿಕಟವರ್ತಿ ಪುತ್ತೂರಲ್ಲಿ.. ? ಅಂತಾ ಹುಬ್ಬೇರಿಸಬೇಡಿ…
ಹೌದು ಯೋಗಿ ಭೇಟಿಯ ಹೀಗೊಂದು ಅಣಕು ಪ್ರದರ್ಶನ ನಡೆದದ್ದು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ರತ್ನಾವತಿ ನಾರಾಯಣ ಬಲ್ಯಾಯರ ಪುತ್ರ ಆರ್ಲಪದವಿನ ಸ್ವಸ್ತಿಕ್ ಜ್ಯೋತಿಷ್ಯಾಲಯದ ಲೋಕೇಶ್ ಬಲ್ಯಾಯ ಮತ್ತು ಕಾವ್ಯಶ್ರೀಯವರ ವಿವಾಹ ಕಾರ್ಯಕ್ರಮದಲ್ಲಿ. ಕೋವಿಡ್ ಹಿನ್ನೆಲೆಯಲ್ಲಿ ಇವರ ಮದುವೆ ಕಾರ್ಯಕ್ರಮವನ್ನು ಜುಲೈ. 7 ರಂದು ದೊಡ್ಡಡ್ಕ ವರನ ಮನೆಯಲ್ಲಿಯೇ ವಿರಳ ಮಂದಿಯ ಸಮ್ಮುಖದಲ್ಲಿ ನಡೆಸಲಾಯಿತಾದರೂ ಅದ್ದೂರಿತನ ಸಂಭ್ರಮ, ಸಂಪ್ರದಾಯಕ್ಕೆ ಕೊರತೆ ಇರಲಿಲ್ಲ.
ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನೇ ಹೋಲುವ ಮಧುಮಗನ ಚಿಕ್ಕಪ್ಪ ದೊಡ್ಡಡ್ಕದ ಷಣ್ಮುಖ ಜ್ಯೋತಿಷ್ಯಾಲಯದ ಸುಬ್ರಹ್ಮಣ್ಯ ಬಲ್ಯಾಯರು ಯೋಗಿಯಂತೆ ಧಿರಿಸುಗಳನ್ನು ಧರಿಸಿ ತನ್ನ ಸಂಗಡಿಗರೊಂದಿಗೆ ಬರುವ ವಿಶೇಷ ದೃಶ್ಯವಿತ್ತು. ಅಲಂಕೃತಗೊಂಡ ರಾಜದ್ವಾರದ ಮೂಲಕ ತನ್ನ ಅಂಗರಕ್ಷಕರು ಮತ್ತು ಸಂಗಡಿಗರೊಂದಿಗೆ ಒಳಪ್ರವೇಶಿಸುವ ಯೋಗಿ ತನ್ನ ಅಭಿಮಾನಿಗಳತ್ತ ಕೈ ಬೀಸುತ್ತಾ ಬಂದು ವೇದಿಕೆ ಹತ್ತಿ ನವದಂಪತಿಗೆ ಶುಭ ಹಾರೈಸುತ್ತಾರೆ. ನೆರೆದವರೆಲ್ಲಾ ಕರತಾಡನದ ಮೂಲಕ ಯೋಗಿಯವರನ್ನು ಸ್ವಾಗತಿಸುತ್ತಾರೆ. ಇದನ್ನೆಲ್ಲಾ ಬಹುಬೇಡಿಕೆಯ ಫೊಟೋಗ್ರಾಫರ್ ಅರುಣ್ ಪುತ್ತೂರು ರವರು ತನ್ನ ವಿಡಿಯೋ ಫೊಟೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಅಂಗರಕ್ಷಕ ಮತ್ತು ಸಂಗಡಿಗರಾಗಿ ಪಾಣಾಜೆ ಬಿಬಿ ಕ್ರಿಯೇಷನ್ಸ್ ನ ಹರೀಶ್ ಕೆ. ಮತ್ತು ಪ್ರದೀಪ್ ಮತ್ತಿತರರು ಯೋಗಿಗೆ ಸಾಥ್ ನೀಡಿದರು.