ಬೆಂಗಳೂರು: ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಬೆಂಗಳೂರಿಗೆ ಮರಳಿದ್ದು, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ಸೂಚನೆ ಮೇರೆಗೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಇನ್ನು ಡಿವಿ ಸದಾನಂದ ಗೌಡ ಅವರು, ಈ ಹಿಂದೆ ಕೂಡ ಕೇಂದ್ರ ಸಚಿವರಾಗಿದ್ದರು. ಅಲ್ಲದೆ, ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಅನುಭವ ಹೊಂದಿದ್ದರು. ಜೊತೆಗೆ ಪಕ್ಷ ಸಂಘಟನೆಯ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇಷ್ಟೆಲ್ಲ ಜವಾಬ್ದಾರಿಗಳಿದ್ದರೂ, ಸಚಿವ ಸ್ಥಾನ ಹಿಂಪಡೆದಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕೆಲವು ಮೂಲಗಳ ಪ್ರಕಾರ ಡಿವಿಎಸ್ ಅವರು ಮತ್ತೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಜವಾಬ್ದಾರಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು.
ಅದರಂತೆ, ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿವಿಎಸ್, ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ. ರಾಜ್ಯ ರಾಜಕಾರಣ ಎಂಟ್ರಿ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
‘ರಾಜಕೀಯದಲ್ಲಿ ಭ್ರಷ್ಟಾಚಾರ ಜಾಸ್ತಿಯಾಗುತ್ತಿದೆ. ಚುನಾವಣೆಗೆ ನಿಲ್ಲುವುದೇ ಕೊಳ್ಳೆ ಹೊಡೆಯಲು ಎಂಬಂತಾಗಿದೆ. ಪ್ರಧಾನಿ ಮೋದಿಯಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷನ ಮನೆಗೂ ರೈಡ್ ಆಗಬೇಕು’ ಎಂದು ಡಿ.ವಿ.ಸದಾನಂದ ಗೌಡರು ಹೇಳಿದ್ದಾರೆ ಎಂದು ಪಬ್ಲಿಕ್ ಟಿ.ವಿ.ಯಲ್ಲಿ ಪ್ರಸಾರವಾದ ರೀತಿಯಲ್ಲಿ ವರದಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದು ಫೇಕ್ ನ್ಯೂಸ್ ಎಂದು ತಿಳಿದು ಬಂದಿದೆ.