ಕಡಬ : ಪಂಜ ಸಮೀಪದ ವ್ಯಕ್ತಿಯೊಬ್ಬರ ಮನೆಯಲ್ಲಿ ಮಕ್ಕಳು, ಮಹಿಳೆಯರನ್ನು ಸಂಬಳ ರಹಿತವಾಗಿ ದುಡಿಸಿಕೊಂಡಿರುವ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ವಿವಿಧ ಇಲಾಖೆ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ಪಂಜ ಗ್ರಾಮದ ಕರಿಕಳದ ವಿಶ್ವನಾಥ್ ಭಟ್ ಎಂಬವರ ಮನೆಯಲ್ಲಿ ಸುಮಾರು 8-10 ಮಕ್ಕಳು ಹಾಗೂ ಮಹಿಳೆಯರನ್ನು ದುಡಿಸುತ್ತಿದ್ದು, ಯಾವುದೇ ರೀತಿಯಲ್ಲಿ ಸಂಬಳವನ್ನು ನೀಡಲಾಗುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಪುಟ್ಟ ಪುಟ್ಟ ಮಕ್ಕಳು ದನ ಮೇಯಿಸುತ್ತಿರುವ ವೀಡಿಯೋ ವೈರಲ್ ಆಗಿತ್ತು. ಸಾಮಾಜಿಕ ಸಂಘಟನೆ ನೀತಿ ತಂಡಕ್ಕೆ ಲಭ್ಯವಾದ ಮಾಹಿಯನ್ವಯ ಬಚ್ಪನ್ ಬಚಾವೋ ಸಂಸ್ಥೆಯು, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಿಗೆ ನೀಡಿದ ದೂರು ಆಧರಿಸಿ, ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶಕರಾದ ಪಲ್ಲವಿ ಆಕುರಾತಿ ಐಎಎಸ್ ಅವರು ದ.ಕ ಜಿಲ್ಲಾಧಿಕಾರಿಗಳಿಗೆ ಘಟನೆಯ ವಿವರ ಪಡೆದು ದಾಳಿ ನಡೆಸಿ ಮಕ್ಕಳನ್ನು ರಕ್ಷಣೆ ಮಾಡುವಂತೆ ಆದೇಶಿಸಿದರು.
ಈ ಆದೇಶದ ಮೇರೆಗೆ ಬಚ್ಪನ್ ಬಚಾವೋ ರಾಜ್ಯ ಸಮನ್ವಯಾಧಿಕಾರಿ ಬೆಂಗಳೂರಿನ ಬಿನು ವರ್ಗೀಸ್, ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮೀ ಅವರ ನೇತೃತ್ವದಲ್ಲಿ ಬಾಲ ಕಾರ್ಮಿಕ ಅಧಿಕಾರಿಗಳು, ಪುತ್ತೂರು ಕಾರ್ಮಿಕ ಇಲಾಖೆ ಅಧಿಕಾರಿಗಳು, ಸುಳ್ಯ ಸಿಡಿಪಿಓ, ಇನ್ನಿತರೆ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.
ದಾಳಿ ನಡೆಸಿದ ವೇಳೆ ಅಧಿಕೃತ ದಾಖಲೆಗಳು ಇಲ್ಲದೇ ಮಾನಸಿಕ ಅಸ್ವಸ್ಥರು, ಮಹಿಳೆಯರು, ಪುಟ್ಟ ಮಕ್ಕಳು ಕಂಡುಬಂದಿದ್ದಾರೆ. ಮನೆಯವರು ಸಾಮಾಜಿಕ ಸೇವೆ ಮಾಡುತ್ತಿದ್ದೇವೆ ಎಂಬುದಾಗಿ ಸಮಾಜಾಯಿಷಿ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಟ್ರಸ್ಟ್ ನೋಂದಣಿಯಾಗಲಿ, ಜನರಿಗೆ ಆಧಾರ್ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳೂ ಇವರ ಬಳಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ 48 ಗಂಟೆಗಳ ಒಳಗಾಗಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುವಂತೆ ಅಧಿಕಾರಿಗಳು ಆದೇಶಿಸಿದರು.
ಮಕ್ಕಳನ್ನು ದುಡಿಸಿಕೊಂಡಿಲ್ಲ; ಆರೋಪ ಸತ್ಯದೂರ: ವಿಶ್ವನಾಥ ಭಟ್ ಕರಿಕ್ಕಳ
ನನ್ನ ಮನೆಗೆ ಕೆಲಸ ಕೇಳಿಕೊಂಡು ಬಂದ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕೆಲಸ ಕೊಟ್ಟಿದ್ದೇವೆ. ಅವರ ಮಕ್ಕಳಲ್ಲಿ ಕೆಲವರನ್ನು ಹಾಸ್ಟೆಲ್‌ಗಳಿಗೆ ಸೇರಿಸಿ, ಮತ್ತು ಇನ್ನೂ ಕೆಲವರನ್ನು ಇಲ್ಲಿ ಶಾಲೆಗಳಿಗೆ ಸೇರಿಸಿ ವಿದ್ಯಾಭ್ಯಾಸ
ಕೊಡಿಸುತ್ತಿದ್ದೇವೆ.ಯಾವ ಮಕ್ಕಳನ್ನೂ ದುಡಿಸಿಕೊಳ್ಳುತ್ತಿಲ್ಲ. ಮೊನ್ನೆ ನಡೆದ ಬೇಲಿ ತೆರವು ಘಟನೆಗೆ ಪ್ರತೀಕಾರವಾಗಿ ಕೆಲವರು ಸುಳ್ಳು ದೂರು ಕೊಡಿಸಿ ಅಧಿಕಾರಿಗಳು ಬರುವಂತೆ ಮಾಡಿದ್ದಾರೆ ಎಂದು ವಿಶ್ವನಾಥ ಭಟ್ ಕರಿಕ್ಕಳ ತಿಳಿಸಿದ್ದಾರೆ.