ಮಂಡ್ಯ: ನಾನು ನಮ್ಮವರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ನೋಡಲು ಹೋಗಿದ್ದೆ. ಈ ವೇಳೆ ಅಭಿಮಾನದಿಂದ ಅವರ ಪಕ್ಕಕ್ಕೆ ಹೋಗಿದ್ದೆ. ಆದರೆ ಅವರು ಇದನ್ನು ಅಪಾರ್ಥ ಮಾಡಿಕೊಂಡು ಥಳಿಸಿದರು ಎಂದು ತೊರೆಬೊಮ್ಮನಹಳ್ಳಿ ಉಮೇಶ್ ಹೇಳಿದ್ದಾರೆ.
ಮದ್ದೂರು ತಾಲೂಕಿನ ತೊರೆ ಬೊಮ್ಮನಹಳ್ಳಿ ಸೊಸೈಟಿಯ ಮಾಜಿ ಅಧ್ಯಕ್ಷರು ಆಗಿರುವ ಉಮೇಶ್, ಡಿ.ಕೆ ಶಿವಕುಮಾರ್ ತಮ್ಮ ಬಳಿ ನಡೆದುಕೊಂಡ ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದು, ಶಿವಕುಮಾರ್ ಅವರು ಗೂಂಡಾಗಿರಿ ಮುಂದುವರೆಸಿದರೆ ಒಂದಲ್ಲಾ ಒಂದು ದಿನ ಮುಳುವಾಗುತ್ತೆ. ಮುಂದೆ ಒಳ್ಳೆದಾಗಬೇಕಂದ್ರೆ ಇವುಗಳೆಲ್ಲವನ್ನ ಬಿಡಬೇಕು ಎಂದು ಸಲಹೆ ನೀಡಿದ್ದಾರೆ.
ಜಿ.ಮದೇಗೌಡ ಅವರನ್ನು ನೋಡಲು ಅಂದು ನಾನು ಆಸ್ಪತ್ರೆಯ ಬಳಿ ಹೋಗಿದ್ದೆ. ಇದೇ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರು ಆಸ್ಪತ್ರೆ ಬಳಿ ಬಂದಿದ್ದರು. ನಾನು ನಮ್ಮವರೆಂದು ಡಿಕೆ ಶಿವಕುಮಾರ್ ಅವರನ್ನು ನೋಡಲು ಹೋಗಿದ್ದೆ. ಅವರ ಮೇಲಿನ ಅಭಿಮಾನದಿಂದ ಪಕ್ಕಕ್ಕೆ ಹೋಗಿದ್ದೆ. ಆದರೆ ಈ ವೇಳೆ ಅವರಿಗೆ ಟಚ್ ಆದ ಕಾರಣ ನನ್ನ ಮೇಲೆ ಕೈ ಮಾಡಿದರು.
ನಾನು ಅವರ ಹೆಗಲ ಮೇಲೆ ಕೈ ಹಾಕಿದ್ದರೇ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ. ಆದರೆ ನನ್ನನ್ನ ಅಪಾರ್ಥ ಮಾಡಿಕೊಂಡು ಥಳಿಸಿದ್ದು ಅವರಿಗೆ ಶೋಭೆ ತರಲ್ಲ. ಅವರ ಅವನತಿಗೆ ಇವೆಲ್ಲಾ ದಿಕ್ಸೂಚಿಯಾಗಿದ್ದು, ಬಿಜೆಪಿ ಅವರು ಈಗಾಗಲೇ ಅವರನ್ನ ಗೂಂಡಾಗಿರಿ ಅಂತೆಲ್ಲಾ ಹೇಳ್ತಾವ್ರೆ. ಅವರಿಗೆ ಮುಂದೆ ಒಳ್ಳೆದಾಗಬೇಕಂದ್ರೆ ಇವೆಲ್ಲವನ್ನು ಬಿಡಬೇಕು. ನಾನು ಪಕ್ಷದ ಹಿನ್ನೆಲೆಯಲ್ಲಿ ಅವರ ಬಳಿ ಹೋಗಿರಲಿಲ್ಲ. ಒಂದೊಮ್ಮೆ ಅವರ ದೇಹಕ್ಕೆ ನಾನು ಟಚ್ ಮಾಡಿದ್ದರೆ ಅವರು ದೂರ ಹೋಗು ಅಂತಾ ಹೇಳಬಹುದಿತ್ತು. ಆದರೆ ಅವರ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.