ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು’’.. ಇದು ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸ್ಟ್ರಾಂಗ್ ಸ್ಟೇಟ್ ಮೆಂಟ್. ತಾನು ನುಡಿದಂತೆ ರಕ್ಷಿತ್ ಶೆಟ್ಟಿ ಒಂದು ಅದ್ಧೂರಿ ಕಲ್ಪನೆಯ ಕನಸಿನ ದೃಶ್ಯಾವಳಿಯನ್ನ ಚಿತ್ರಪ್ರೇಮಿಗಳಿಗೆ ಅರ್ಪಿಸಿ ಹೊಸ ಕುತೂಹಲದ ಕಿಚ್ಚು ಹತ್ತಿಸಿದ್ದಾರೆ.. ಮತ್ತೊಮ್ಮೆ ತಾನು ಕಂಡಂತೆ, ಅವರು ಕಂಡಂತೆ, ಇವ್ರು ಕಂಡಂತೆಯ ಉಳಿದವರು ಕಂಡಂತೆ ಮುಂದುವರೆದ ಬೃಹತ್ ಭಾಗಕ್ಕೆ ಮುಂದಾಗಿದ್ದಾರೆ.
ಮನುಷ್ಯನಿಗೆ ಅವಮಾನ ಆಗ್ಲೇಬೇಕು. ಅದ್ರಲ್ಲೂ ಪ್ರತಿಭೆಯುಳ್ಳ ಕಲಾವಿದನಿಗೆ ಅವಮಾನ ಆಗ್ಲೇಬೇಕು. ಆಗ್ಲೇ ಅವನೊಳಗಿದ್ದ ಕಲಾ ಪ್ರತಿಭೆಯ ಜ್ವಾಲೆ ಪುಟಿದೇಳೋದು. ರಕ್ಷಿತ್ ಶೆಟ್ಟಿ ಮತ್ತೊಮ್ಮೆ ದೊಡ್ಡ ಮಟ್ಟದ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ತಾವೇ ಡೈರೆಕ್ಷನ್ ಮಾಡಿ ನಟಿಸಿದ್ದ ಉಳಿದವರು ಕಂಡಂತೆ ಸಿನಿಮಾವನ್ನ ಮತ್ತೊಂದು ದೃಶ್ಯಕೋನದಲ್ಲಿ ನೋಡಲು ಸಜ್ಜಾಗಿದ್ದಾರೆ.
777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ.. ಸಿನಿಮಾಗಳಲ್ಲಿ ಬ್ಯುಸಿ ಇರೋ ಸಿಂಪಲ್ ಸ್ಟಾರ್ ತಮ್ಮ ಹೊಸ ಕನಸಿನ ಸಿನಿಮಾಕ್ಕೆ ಸಜ್ಜಾಗಿದ್ದಾರೆ.. ಪುಣ್ಯ ಕೋಟಿಯ ಕಥೆಯನ್ನ ಹೇಳ್ತಿನಿ ಎಂದಿದ್ದ ರಕ್ಷಿತ್ ಶೆಟ್ಟಿ ಯೂ ಟರ್ನ್ ಹೊಡೆದು ಉಳಿದವರು ಕಂಡಂತೆ ಸಿನಿಮಾ ಹೀರೋ ಕ್ಯಾರೆಕ್ಟರ್ ‘ರಿಚರ್ಡ್ ಆಂಟನಿ’ ಯಾಗಲು ಸಜ್ಜಾಗಿದ್ದಾರೆ.
ಹೊಸ ಹೊಸ ಪ್ರತಿಭೆಗಳಿಗೆ ಬಂಗಾರದ ಅವಕಾಶ ಕೊಡ್ತಿರೋ ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ರಕ್ಷಿತ್ ಶೆಟ್ಟಿ ಅವರ ಕನಸಿನ ಪುಣ್ಯ ಕೋಟಿ ಸಿನಿಮಾವನ್ನ ಹೊಂಬಾಳೆ ಬ್ಯಾನರ್ ಮಾಡುತ್ತಿದೆ ಎನ್ನಲಾಗಿತ್ತು. ಬೈಂದೂರು ಹಾಗೂ ಕುಂದಾಪುರದ ಕಡಲ ತೀರದಲ್ಲಿ ಪ್ರೋಮೋ ಶೂಟ್ ಕೂಡ ಮಾಡಲಾಗಿದೆ ಅನ್ನೋ ಗುಟ್ಟಾದ ಸಮಾಚಾರವೂ ಇತ್ತು. ಈಗ ಆ ಮಾತುಗಳಿಗೆ ಪುಷ್ಠಿ ಮತ್ತು ಹೊಸ ದೃಷ್ಠಿ ನೀಡುವಂತೆ ಒಂದೊಳ್ಳೆ ಟೈಟಲ್ ಟೀಸರ್ ಅನ್ನ ರಕ್ಷಿತ್ ಶೆಟ್ಟಿ ಹೊಂಬಾಳೆ ಬ್ಯಾನರ್ನಲ್ಲಿ ಬಿಡುಗಡೆ ಮಾಡಿ ಚಿತ್ರಪ್ರೇಮಿಗಳ ಮನಸುಗಳನ್ನ ಬೆರಗು ಮೂಡಿಸಿದ್ದಾರೆ.
ರಿಚರ್ಡ್ ಆಂಟನಿ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿಯನ್ನ ಹೊತ್ತಿದ್ರೆ ಕರಮ್ ಚಾವ್ಲಾ ಕ್ಯಾಮೆರಾ ಕಲ್ಪನೆ, ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ವಿಜಯ ಕಿರಗಂದೂರು ಅವರ ನಿರ್ಮಾಣದ ಹೊಣೆ ಈ ಚಿತ್ರಕ್ಕೆ ಇರಲಿದೆ. ಮುಂದಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿಯವರ ರಿಚರ್ಡ್ ಆಂಟನಿ ಸಖತ್ ಸದ್ದು ಮಾಡೋದಂತು ಗ್ಯಾರಂಟಿ.