ಮಂಗಳೂರು : ಉಡುಪಿ-ಮಂಗಳೂರು ನಡುವೆ ಸಂಚಾರ ನಡೆಸುವ ಖಾಸಗಿ ಬಸ್ ವೊಂದರ ಚಾಲಕ ನಿರ್ವಾಹಕರು ಆಟೋ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಚೆಳಾರು ನಿವಾಸಿ ಸುಧಾಕರ್(55) ಹಲ್ಲೆಗೊಳಗಾದ ಆಟೋ ಚಾಲಕ.
ಸುರತ್ಕಲ್ ಸೂರಕ್ ಇಂಟರ್ ನ್ಯಾಶನಲ್ ಹೋಟೆಲ್ ಬಳಿ ಘಟನೆ ನಡೆದಿದೆ. ಸುರತ್ಕಲ್ ಮಾರಿಗುಡಿ ಪ್ರದೇಶದಲ್ಲಿ ಪ್ರಯಾಣಿಕರು ಆಟೋಗೆ ಕೈ ತೋರಿಸಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ಬಸ್ ಚಾಲಕ ರಿಕ್ಷಾವನ್ನು ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಸುಧಾಕರ್ ಸುರತ್ಕಲ್ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಆಟೋದಲ್ಲಿ ದುಡಿಯುತ್ತಿದ್ದರು. ಇನ್ನು ಈ ನಡುವೆ ಹಲ್ಲೆ ನಡೆಸಿರುವ ಬಸ್ ಸಿಬ್ಬಂದಿಗಳನ್ನು ಬಂಧಿಸುವಂತೆ ಆಟೋ ಚಾಲಕದ ಸಂಘ ಒತ್ತಾಯಿಸಿದ್ದು, ಬಸ್ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.