ಮಂಗಳೂರು: ನೀರಿನಲ್ಲಿ ಆಟವಾಡುತ್ತಿದ್ದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ತೋಕೂರು ನಿವಾಸಿ ಪ್ರಸ್ತುತ ಕಾಟಿಪಳ್ಳದಲ್ಲಿ ವಾಸವಿರುವ ನಝೀರ್ ಎಂಬವರ ಒಂದೂವರೆ ವರ್ಷ ಪ್ರಾಯದ ಮಗು ಮೃತಪಟ್ಟ ದುರದೃಷ್ಟವಂತ ಮಗು.
ಮಗುವಿನ ತಂದೆ ಮಗುವನ್ನು ಮಲಗಿಸಿ ಹೊರಗೆ ಹೋಗಿದ್ದರು. ತಾಯಿ ಮನೆಯೊಳಗೆ ಮನೆ ಕೆಲಸದಲ್ಲಿ ನಿರತರಾಗಿದ್ದರು. ಮಲಗಿ ನಿದ್ರಿಸುತ್ತಿದ್ದ ಮಗು ಎದ್ದು ಏನು ಸದ್ದು ಮಾಡದೆ ನೇರವಾಗಿ ಶೌಚಾಲಯಕ್ಕೆ ಹೋಗಿ ಬಕೆಟ್ ಗೆ ತಲೆ ಹಾಕಿದೆ. ಬಕೆಟ್ ನಲ್ಲಿ ಅರ್ಧಕ್ಕಿಂತಲೂ ಹೆಚ್ಚು ನೀರಿತ್ತು ಎನ್ನಲಾಗಿದೆ.
ಒಂದಷ್ಟು ಹೊತ್ತಿನ ಬಳಿಕ ತಾಯಿ ಮಗುವಿದ್ದ ಕೋಣೆಗೆ ಬಂದು ನೋಡಿದಾಗ ಮಗು ಅಲ್ಲಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದ ಬಳಿಕ ಶೌಚಾಲಯಕ್ಕೆ ಹೋಗಿ ನೋಡಿದಾಗ ಮಗು ಬಕೆಟ್ ನಲ್ಲಿ ತಲೆಕೆಳಗಾಗಿ ಬಿದ್ದಿರುವುದು ಕಂಡು ಬಂತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ಮಗುವನ್ನು ಕಳೆದುಕೊಂಡ ತಂದೆ, ತಾಯಿ, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.