ಉಪ್ಪಿನಂಗಡಿ: ಅಪ್ರಾಪ್ತಿಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ವ್ಯಕ್ತಿವೋರ್ವ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ಆರೋಪ ಕೇಳಿ ಬಂದಿದ್ದು ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಪ್ರದೇಶದ ಬಾಲಕಿಯನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಕ್ಕಡದ ನಿವಾಸಿ ರುಕ್ಕಯ್ಯ ಮಡಿವಾಳ ಕಾರಿನಲ್ಲಿ ಬಂದು ತನ್ನ ಕಾರಿನಲ್ಲಿ ಬರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಬಾಲಕಿಯು ಒಪ್ಪದೇ ಇದ್ದಾಗ ಆಕೆಯನ್ನು ಬೆದರಿಸಿ ಬಲವಂತವಾಗಿ ಕಾರಿನಲ್ಲಿ ಉಪ್ಪಿನಂಗಡಿ ಕಡೆಗೆ ಕರೆದುಕೊಂಡು ಹೋಗಿ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಹಿಂಸೆ ನೀಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಭಯಗೊಂಡ ಬಾಲಕಿಯು ಕಿರುಚಾಡಿದ್ದಾಳೆ. ಈ ಪರಿಣಾಮ ಆತ ಬಾಲಕಿಯನ್ನು ಪುನಃ ಮನೆಗೆ ಕರೆತಂದು ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಯಾರಿಗೂ ಕೂಡ ಈ ಬಗ್ಗೆ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು
ಬಾಲಕಿಯ ತಂದೆ ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.