ಪಡುಬಿದ್ರೆ: ಕೊಲೆಗಾರರು ಯಾವುದೇ ಸ್ಯಾಕ್ಷ್ಯ ಉಳಿಸಿರಲಿಲ್ಲ, ಘಟನೆಯ ನೋಡಿರುವ ಪ್ರತ್ಯಕ್ಷ್ಯದರ್ಶಿಗಳಿರಲಿಲ್ಲ, ಯಾವುದೇ ಸಾಕ್ಷಿಗಳಿರಲಿಲ್ಲ, ಸಿ.ಸಿ.ಟಿ.ವಿ ದೃಶ್ಯಾವಳಿಗಳಿರಲಿಲ್ಲ..ಅಕ್ಷರಶಃ ಪೊಲೀಸ್ ಇಲಾಖೆಗೆ ಕಠಿಣ ಸವಾಲಾಗಿದ್ದ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ಜು.12ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಸಫಲರಾಗಿದ್ದಾರೆ. 5 ವಿಶೇಷ ಪೊಲೀಸ ತಂಡ ತಂಡ ಕೊಲೆ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಪ್ರಕರಣ ಸಂಬಂಧ ಪತಿ ರಾಮಕೃಷ್ಣ ಗಾಣಿಗ, ಸುಪಾರಿ ಕಿಲ್ಲರ್ ಆರೋಪಿ ಸ್ವಾಮಿನಾಥ ನಿಶಾದ ( 38 ) ಬಂಧಿಸಲಾಗಿದ್ದು, ಕೊಲೆಗೆ ಸಾಥ್ ನೀಡಿರುವ ಮತ್ತೋರ್ವ ಆರೋಪಿ ಹಾಗೂ ರಾಮಕೃಷ್ಣ ಗಾಣಿಗರಿಗೆ ಸುಪಾರಿ ಕಿಲ್ಲರ್ ನನ್ನು ಪರಿಚಯಿಸಿದ ಕೇರಳ ಮೂಲದ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆ ಪ್ರಕರಣವನ್ನು ಪರಿಹರಿಸುವಲ್ಲಿ ಭಾಗಿಯಾಗಿರುವ ಇಡೀ ತಂಡಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ನಿರೀಕ್ಷಕ ಪ್ರವೀಣ್ ಸೂದ್ ₹ 50000 ನಗದು ಬಹುಮಾನ ಹಾಗೂ ತಂಡದ ಎಲ್ಲಾ ಸದಸ್ಯರಿಗೆ ಪ್ರಶಂಸನೀಯ ಪ್ರಮಾಣಪತ್ರ ಘೋಷಿಸಿದ್ದಾರೆ.
ಕೊಲೆ ತನಿಖೆ ಸಂಬಂಧ ಕುಂದಾಪುರದಿಂದ ಪಡುಬಿದ್ರಿಯವರೆಗೆ ಎಲ್ಲಾ ಸಿ.ಸಿ.ಟಿ.ವಿಗಳನ್ನು ಪರಿಶೀಲಿಸಲಾಗಿತ್ತು. ಆದರೂ
ಯಾವುದೇ ಸುಳಿವು ಕಂಡುಬಂದಿರಲಿಲ್ಲ.ವಿಮಾನ ಪ್ರಯಾಣದ ವಿವರಗಳನ್ನು,ಟ್ಯಾಕ್ಸಿ ಚಾಲಕರನ್ನು, 20ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ನಿವಾಸಿಗಳನ್ನು ಪ್ರಶ್ನಿಸಿದರೂ ಪೊಲೀಸರಿಗೆ ಕೊಲೆಗಾರರ ಸುಳಿವು ಸಿಕ್ಕಿರಲಿಲ್ಲ. ಪರಿಚಿತರಿಂದಲೇ ಕೊಲೆ ನಡೆದಿರಬಹುದು ಎನ್ನುವ ಅನುಮಾನಕ್ಕೆ 2 ಟೀ ಕುಡಿದ ಕಪ್ ಗಳು ಮಾತ್ರ ಸಾಕ್ಷಿಯಾಗಿತ್ತು.ಕೊಲೆ ಕೇಸ್ ಭೇದಿಸುವಲ್ಲಿ ಐದು ವಿಶೇಷ ತಂಡದ ಜೊತೆಗೆ ಮಣಿಪಾಲ್ ಫೋರೆನ್ಸಿಕ್ ತಂಡ, ಮಂಗಳೂರು ಎಫ್‌ಎಸ್‌ಎಲ್ ತಂಡವೂ ಸಾಥ್ ನೀಡಿದ್ದು ಇದೀಗಾ ವಿಶಾಲಾ ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ.
6-7 ತಿಂಗಳ ಹಿಂದೆ ದುಬೈನಲ್ಲೇ ರೂಪಿಸಿದ ಸಂಚು: ಪತ್ನಿ ವಿಶಾಲಾರನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದ ರಾಮಕೃಷ್ಣ ಗಾಣಿಗಾ ಇದಕ್ಕಾಗಿ ಆರೇಳು ತಿಂಗಳ ಹಿಂದೆಯೇ ದುಬೈನಲ್ಲಿ ಕುಳಿತು ಸಂಚು ರೂಪಿಸಿದ್ದ. ಇದಕ್ಕಾಗಿ ಇದಕ್ಕಾಗಿ 2 ಲಕ್ಷವನ್ನು ಸುಪಾರಿ ಎಂದು ಪಾವತಿಸಲಾಗಿತ್ತು. ಸಾಕಷ್ಟು ಪೂರ್ವ ಸಿದ್ದತೆ ಮಾಡಿಕೊಂಡಿದ್ದ ರಾಮಕೃಷ್ಣ ಗಾಣಿಗ ಮಾರ್ಚ್ ನಲ್ಲಿ ದುಬೈನಿಂದ ಕುಟುಂಬ ಸಮೇತ ಊರಿಗೆ ಬಂದಿದ್ದಾಗ ಮನೆ ಮತ್ತು ಇತರ ಸ್ಥಳಗಳಿಗೆ ಪರಿಚಯಿಸಲು ತನ್ನ ಉಪ್ಪಿನ ಕೋಟೆಯ ಪ್ಲ್ಯಾಟ್‌ಗೆ ಕರೆಯಿಸಿಕೊಂಡಿದ್ದ. ಮಾತ್ರವಲ್ಲದೆಪತ್ನಿ ವಿಶಾಲ ಗಾಣಿಗರಿಗೆ ತನ್ನ ಆಪ್ತ ಸ್ನೇಹಿತರೆಂದು ಪರಿಚಯಿಸಿದ್ದ.
ಕೊಲೆಯ ವಾರದ ಹಿಂದೆ ಮತ್ತೆ ಪೂರ್ವ ಸಿದ್ದತೆ: ವಿದೇಶದಲ್ಲಿದ್ದ ವಿಶಾಲ ಗಾಣಿಗ ಜು.2ರಂದು ತನ್ನ ಪುತ್ರನೊಂದಿಗೆ ಊರಿಗೆ ಬಂದಿದ್ದು, ಉಪ್ಪಿನ ಕೋಟೆಯ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಜುಲೈ 7 ರಂದು ರಾಮಕೃಷ್ಣರ ಆಸ್ತಿಗೆ ಸಂಬಂಧಿಸಿದ ಪಾಲುಪಟ್ಟಿ ನಡೆದಿದ್ದು, ಜುಲೈ 12ರಂದು ವಿಶಾಲ ಗಾಣಿಗ ತನ್ನ ತಂದೆ, ತಾಯಿ ಹಾಗೂ ಆರು ವರ್ಷದ ಪುತ್ರಿಯೊಂದಿಗೆ ಆಟೋ ರಿಕ್ಷಾದಲ್ಲಿ ತಾಯಿ ಮನೆ ಗುಜ್ಜಾಡಿಗೆ ಹೋಗಿದ್ದರು. ಇದಾದ ಬಳಿಕ ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ವಿಶಾಲ ಗಾಣಿಗ ಆಟೋರಿಕ್ಷಾದಲ್ಲಿ ಮತ್ತೆ ಫ್ಲ್ಯಾಟ್‌ಗೆ ಹಿಂತಿರುಗಿದ್ದರು.
ಕೊಲೆಯಾಗುವ ವಾರದ ಹಿಂದೆಯಷ್ಟೇ ಪತ್ನಿ ತನ್ನ ಅಣತಿಯಂತೆ ಫ್ಲ್ಯಾಟ್ ಬರಬಹುದೇ ಎಂದು ಪರೀಕ್ಷಿಸಲು, ಆತ ತನ್ನ ಸ್ನೇಹಿತನ ಮೂಲಕ ಪಾರ್ಸೆಲ್ ಬಂದಿದೆ ಪಡೆದುಕೊಳ್ಳಲು ಪತ್ನಿಗೆ ವಿಶಾಲಗೆ ಹೇಳಿದ್ದ. ಅದರಂತೆ ಗಂಡನ ಅಣತಿಯಂತೆ ಪತ್ನಿ ಫ್ಲ್ಯಾಟ್ ಗೆ ಬಂದು, ಸ್ನೇಹಿತರೊಬ್ಬರ ಮೂಲಕ ಕಳುಹಿಸಿದ ಚಾಕಲೇಟ್, ಕಾಸ್ಮೆಟಿಕ್ಸ್ ಮುಂತಾದ ವಸ್ತುಗಳಿದ್ದ ಪಾರ್ಸೆಲ್ ಪಡೆಕೊಂಡಿದ್ದರು. ಹೀಗಾಗಿ ಪತ್ನಿಯ ಬರುವಿಕೆಯನ್ನು ಖಚಿತಪಡಿಸಿಕೊಂಡಿದ್ದ. ಕೊಲೆ ನಡೆದ ದಿನ ವಿಶಾಲಾ ಮನೆ ತಲುಪಿದ 5-10 ನಿಮಿಷಗಳ ನಂತರ ಸುಪಾರಿ ಕೊಲೆಗಾರರು ಮನೆಗೆ ಬಂದಿದ್ದರು.
ಜು.12 ರಂದು ಫ್ಲ್ಯಾಟ್ ಗೆ ತನ್ನಿಬ್ಬರು ಸ್ನೇಹಿತರು ಬಂದಿದ್ದಾರೆ ಎಂದು ತಿಳಿಸಿ ತಕ್ಷಣ ಹಿಂತಿರುಗುವಂತೆ ಹೇಳಿದ್ದ. ಸುಪಾರಿ ಕಿಲ್ಲರ್ ಆರೋಪಿಗಳಿಬ್ಬರಿಗೂ ಮಾರ್ಚ್ ನಲ್ಲೇ ಮನೆ , ಸ್ಥಳ ವಿಶಾಲಾರನ್ನು ನೋಡಿರುವುದರಿಂದ ಸಂಚು ರೂಪಿಸುವುದು ಸುಲಭವಾಗಿತ್ತು. ವಿಶಾಲ ಅವರು ಅಪರಿಚಿತರನ್ನು ಮನೆಯೊಳಗೆ ಸೇರಿಸುತ್ತಿರಲಿಲ್ಲ. ಗಂಡನ ಸ್ನೇಹಿತರು ಮನೆಗೆ ಬಂದರೂ ಗಂಡನಿಗೆ ವಿಡಿಯೋ ಕಾಲ್ ಮಾಡಿ ಖಚಿತಪಡಿಸಿಕೊಂಡ ಮೇಲೆ ಒಳಗೆ ಕರೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಮಾರ್ಚ್ ನಲ್ಲಿ ಗಂಡನೇ ಖುದ್ದು ತನ್ನ ಸ್ಭೇಹಿತರನ್ನು ಪರಿಚಯಿಸಿಕೊಟ್ಟಿರುವುದರಿಂದ ತನಗರಿವಿಲ್ಲದೆಯೇ ವಿಶಾಲಾ ಸುಪಾರಿ ಕಿಲ್ಲರ್ ಗಳಿಗೆ ಬಾಗಿಲು ತೆರೆದಿದ್ದರು.
ನೇಪಾಳದ ಗಡಿಯದಲ್ಲಿ ಸುಪಾರಿ ಕಿಲ್ಲರ್ ಬಂಧನ: ಪೊಲೀಸರಿಗೆ ದೊರಕಿದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರಖ್ ಪುರ ಪೊಲೀಸರ ಸಹಕಾರದೊಂದಿಗೆ, ಗೋರುರ ಜಿಲ್ಲೆಯ ಚಾರ್ಪನ್ ಬುಹುರಾಗ್‌ಗ್ರಾಮದ ಸ್ವಾಮಿನಾಥ ನಿಶಾದ ಪ್ರಾಯ ( 38 ) ಜು.19 ರಂದು ನೇಪಾಳದ ಗಡಿಯಲ್ಲಿ ಬಂಧಿಸಲಾಯಿತು. ವಿಚಾರಣೆ ವೇಳೆ ಕಳೆದ 6 ತಿಂಗಳಿನಿಂದ ಸಂಚು ನಡೆಸಿ ಸುಫಾರಿ ಹಂತಕರಿಗೆ ಸುಮಾರು 2 ಲಕ್ಷಕ್ಕಿಂತ ಮಿಕ್ಕಿ ಹಣ ನೀಡಿ ದುಬೈಯಲ್ಲಿ ಕುಳಿತು ಪ್ಲಾನ್ ಮಾಡಿ ವಿಶಾಲಾ ಅವರ ಗಂಡ ರಾಮಕೃಷ್ಣ ಕೊಲೆಗೆ ಸುಪಾರಿ ನೀಡಿರುವುದು ಬಾಯ್ಬಿಟ್ಟಿದ್ದಾನೆ.
ಕೊಲೆಗೆ ಮನಸ್ತಾಪ ಕಾರಣ: ವಿಶಾಲ ಗಾಣಿಗ ಅವರ ಕೊಲೆಗೆ ಪತಿ, ಪತ್ನಿಯ ನಡುವಿನ ವೈಮನಸ್ಸು ಕಾರಣ ಎನ್ನುವ ಅಂಶ ಪ್ರಾಥಮಿಕ ತನಿಖೆ ವೇಳೆ ಕಂಡುಬಂದಿದೆ. ಆದರೆ ಪತಿಯೊಂದಿಗಿದ್ದ ಮನಸ್ತಾಪದ ಕುರಿತು ವಿಶಾಲಾ ತನ್ನ ತವರು ಮನೆಯವರಿಗೆ ತಿಳಿಸಿರಲಿಲ್ಲ. ಪೊಲೀಸರಿಗೆ ಕೊಲೆಗೆ ಬೇರೆ ಕಾರಣ ಅನುಮಾನ ಹಾಗೂ ವಿಸ್ತೃತವಾದ ವಿವರಗಳಿಗಾಗಿ ರಾಮಕೃಷ್ಣನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ.
ಪತಿಯ ಕೈವಾಡವೇ ತಿಳಿದಿರಲಿಲ್ಲ: ಪತ್ನಿ ವಿಶಾಲ ಗಾಣಿಗ ಸಾಯುವ ಮುನ್ನ ವಿದೇಶದಲ್ಲಿದ್ದ ಪತಿ ರಾಮಕೃಷ್ಣ ಗಾಣಿಗ ಅವರು ಪತ್ನಿ ಸತ್ತ ವಿಷಯ ತಿಳಿದು ಊರಿಗೆ ಬಂದಿದ್ದರು. ಬಳಿಕ ಆತನ ಮನೆಯಲ್ಲೇ ಪತ್ನಿಯ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಯೂ ಮಾಡಲಾಗಿತ್ತು. ಪತ್ನಿಯ ಅಂತ್ಯಸಂಸ್ಕಾರ, ಬಳಿಕ ನಡೆಯುವ ಕ್ರಿಯೆಯಲ್ಲಿಯೂ ಪತಿ ಪಾಲ್ಗೊಂಡಿದ್ದರು.