ಪುತ್ತೂರು: ಡ್ರೋನ್ ಪ್ರತಿರೋಧ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್.ಎಸ್.ಜಿ)ಗೆ ನೆರವಾಗುವುದಕ್ಕಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಸೆಕ್ಯುರಿಟಿ ಆಂಡ್ ಸೈಂಟಿಫಿಕ್ ಟೆಕ್ನಿಕಲ್ ರಿಸರ್ಚ್ ಅಸೋಸಿಯೇಶನ್ (ಶಸ್ತ್ರ) ಸಂಸ್ಥೆಯನ್ನು ಇತ್ತೀಚೆಗೆ ರೂಪಿಸಲಾಗಿದೆ. ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಕಜೆಮಾರು ಕೊನಾರ್ಕ್ ರೈ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿರುವುದು ಪುತ್ತೂರಿಗೆ ಹೆಮ್ಮೆಯಾಗಿದೆ.
ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ (ಆರ್.ಆರ್.ಯು) ಆರಂಭಿಸಿದ್ದರು. ಭದ್ರತಾ ಸಿಬ್ಬಂದಿಗೆ ವಿಶೇಷ ತರಭೇತಿ ನೀಡುವುದು ಇದರ ಉದ್ದೇಶವಾಗಿತ್ತು. ಅವರು ಪ್ರಧಾನಿಯಾದ ಬಳಿಕ ಆರ್.ಆರ್.ಯು ಮಸೂದೆ ಜಾರಿಗೊಳಿಸಿ ವಿ.ವಿಯನ್ನು ಕೇಂದ್ರ ಸರಕಾರದಡಿ ತಂದರು. ಈ ವಿ.ವಿ.ಯ ಅಂಗ ಸಂಸ್ಥೆಯಾಗಿ `ಶಸ್ತ್ರ’ ಸ್ಥಾಪಿಸಲಾಗಿದೆ.
ಶಸ್ತ್ರ ಏನಿದರ ಉದ್ದೇಶ..?
ಎಲ್ಲಾ ಸ್ತರದ ಭದ್ರತ ಪಡೆಗಳ ಅಗತ್ಯ ಸಾಧನಗಳು, ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಅನ್ವೇಷಣೆ ಮಾಡುವವರಿಗೆ ನೆರವಾಗುವುದು ಶಸ್ತ್ರದ ಮುಖ್ಯ ಉದ್ದೇಶವಾಗಿದೆ. ಭದ್ರತಾ ಪಡೆಗಳ ಅಗತ್ಯಗಳನ್ನು ಅರಿತುಕೊಂಡು ನ್ಯಾಷನಲ್ ಇನೋವೇಶನ್ ಚಾಲೆಂಜ್ ಆರಂಭಿಸಲಾಗುತ್ತದೆ. ಆತ್ಮನಿರ್ಭರ ಭಾರತದಡಿ ಭಾರತೀಯ ಕಂಪೆನಿ, ಸ್ಪಾರ್ಟ್ ಆಪ್‌ಗಳು ಸಿದ್ದಪಡಿಸುವ ಸುಧಾರಿತ ತಂತ್ರಜ್ಞಾನಗಳನ್ನು ಭದ್ರತಾ ಪಡೆ ಮತ್ತು ಶಸ್ತ್ರ ತಂಡ ಪರಿಶೀಲಿಸುತ್ತದೆ. ಒಪ್ಪಿಗೆಯಾದರೆ ಉತ್ಪಾದನೆಗೆ ಆರ್ಥಿಕ ಬೆಂಬಲವನ್ನು ಶಸ್ತ್ರ ನೀಡುತ್ತದೆ. ಇದೀಗ ಕೊನಾರ್ಕ್ ರೈಯವರ ಡ್ರೋನ್ ತಡೆ ತಂತ್ರಜ್ಞಾನ ಅನ್ವೇಷಣೆ ಎಲ್ಲರ ಮೆಚ್ಚುಗೆ ಗಳಿಸಿದೆ.
ಕೊನಾರ್ಕ್ ರೈ:
ಪುತ್ತೂರಿನ ತಾಲೂಕಿನ ಕೆದಂಬಾಡಿ ಗ್ರಾಮದ ಕಜೆಮಾರು ನಿವಾಸಿಯಾಗಿರುವ ಕೊನಾರ್ಕ್ ರೈಯವರು ಕ್ಯಾಂಪ್ಕೋ ಸಂಸ್ಥೆಯ ಮಾಜಿ ಎಂ.ಡಿ ಪ್ರಮೋದ್ ಕುಮಾರ್ ರೈ ಇಳಂತಾಜೆ ಮತ್ತು ಶೋಭಾ ಪ್ರಮೋದ್ ರೈಯವರ ದ್ವಿತೀಯ ಪುತ್ರರಾಗಿದ್ದಾರೆ. ಬೆಂಗಳೂರು ಮತ್ತು ಅಳಿಕೆಯಲ್ಲಿ ಶಿಕ್ಷಣ ಪಡೆದು ಗುಜರಾತ್‌ನ ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಜಿನೇವಾದಲ್ಲಿ ದೇಶ-ವಿದೇಶಗಳ ಸಂಬಂಧ ಸುಧಾರಣೆ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಗುಜರಾತ್‌ಗೆ ಮರಳಿ ರಾಷ್ಟ್ರೀಯ ರಕ್ಷಾ ವಿ.ವಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಕಳೆದ ಸೆಪ್ಟಂಬರ್‌ನಿಂದ `ಶಸ್ತ್ರ’ದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರು ಮಾಜಿ ಎಂ.ಎಲ್.ಸಿ ಕುಂಬ್ರ ದಿ. ಜತ್ತಪ್ಪ ರೈಯವರ ಮೊಮ್ಮಗರಾಗಿದ್ದಾರೆ.
ಭದ್ರತಾ ಪಡೆಗಳಿಗೆ ಅಗತ್ಯವಿರುವ ಹೊಸ ತಾಂತ್ರಿಕ ಸಾಧನಗಳನ್ನು ಶಸ್ತ್ರದ ಸಹಕಾರದೊಂದಿಗೆ ಸಿದ್ದಪಡಿಸಲಾಗುತ್ತದೆ. ಯೋಧರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಗೆ ಖುದ್ದಾಗಿ ತೆರಳಿ ಅಧ್ಯಯನ ಮಾಡಿ ಹೊಸ ಅನ್ವೇಷಕರಿಗೆ ಅವಕಾಶ ನೀಡಲಾಗುತ್ತದೆ. ಸದ್ಯ ಆಂಟಿ ಡ್ರೋನ್ ಟೆಕ್ನಾಲಜಿಯನ್ನು ಅಭಿವೃದ್ದಿಸಲು ಉದ್ದೇಶಿಸಲಾಗಿದೆ – ಕೊನಾರ್ಕ್ ರೈ, ಎಂ.ಡಿ ಶಸ್ತ್ರ