ಬಂಟ್ವಾಳ: ಬೆಂಗಳೂರು ಮೂಲದ ವ್ಯಕ್ತಿಯೋರ್ವ ಪಾಣೆಮಂಗಳೂರು ಸೇತುವೆಯ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾದ ಘಟನೆ ಬುಧವಾರ ನಡೆದಿದ್ದು, ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು ದಾಸರಹಳ್ಳಿ ಮೂಲದ ಸತ್ಯವೇಲು(29) ಎಂಬಾತ ನಾಪತ್ತೆಯಾದ ಯುವಕ. ಈತ ಸುಮಾರು 15 ದಿನಗಳ ಹಿಂದೆ ಇದೇ ರೀತಿ ನದಿಗೆ ಹಾರುವುದಕ್ಕೆ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಆಗಮಿಸಿದ್ದ. ಆದರೆ ಸ್ಥಳೀಯರು ಆತನನ್ನು ರಕ್ಷಿಸಿದ್ದು, ಬಳಿಕ ಬಂಟ್ವಾಳ ನಗರ ಪೊಲೀಸರು ಆತನ ಪೋಷಕರನ್ನು ಕರೆಸಿ ಕಳುಹಿಸಿಕೊಟ್ಟಿದ್ದರು.
ಆತನ ಬೈಕ್ ಬುಧವಾರ ಮುಂಜಾನೆ 4:30 ಸುಮಾರಿಗೆ ಪಾಣೆಮಂಗಳೂರು ಸೇತುವೆಯ ಮೇಲೆ ಮತ್ತೆ ಪ್ರತ್ಯಕ್ಷವಾಗಿದ್ದು, ಬೈಕ್ ಸ್ಟಾರ್ಟ್ ನಲ್ಲೇ ಇತ್ತು ಎನ್ನಲಾಗಿದೆ. ಬಳಿಕ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೈಕನ್ನು ಠಾಣೆಗೆ ತಂದಿದ್ದಾರೆ.
ಆತ ಮೊಬೈಲ್ ಆನ್ಲೈನ್ ಗೇಮ್ ಮೂಲಕ ಸಾಕಷ್ಟು ಹಣ ಕಳೆದುಕೊಂಡಿದ್ದು, ಹೀಗಾಗಿ ಆತ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತನ ನಾಪತ್ತೆಯ ಕುರಿತು ಬೆಂಗಳೂರಿನ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.