ಹಾಸನ: ಬಾಯಿ, ಕಾಲಿಗೆ ಹಗ್ಗ ಕಟ್ಟಿ ಪುಟ್ಟ ಗೂಡ್ಸ್ ವಾಹನದಲ್ಲಿ 100 ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅಪಘಾತವಾಗಿ 50 ಕರುಗಳು ಬಲಿಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ, ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ಆ.18 ರಂದು ರಾತ್ರಿ ನಡೆದಿದೆ.
ಪುಟ್ಟ ಗೂಡ್ಸ್ ವಾಹನದಲ್ಲಿ 100 ಕರುಗಳ ಸಾಗಿಸಲಾಗುತ್ತಿತ್ತು. ಗೋಹತ್ಯೆ ನಿಷೇಧ ಇರುವುದರಿಂದ ದುಷ್ಟರು ರಾತ್ರೋ ರಾತ್ರಿ ಗೋವುಗಳನ್ನು ಸಾಗಿಸುತ್ತಿದ್ದರು. ಬಾಯಿ, ಕಾಲಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಮೂಕ ಪ್ರಾಣಿಗಳ ಸಾಗಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ.
ಗೂಡ್ಸ್ ಆಟೋದಲ್ಲಿ ಉಸಿರುಗಟ್ಟಿ ಹಲವು ಕರುಗಳ ಸಾವನ್ನಪ್ಪಿದ್ದು, ಅಪಘಾತದ ಬಳಿಕ ಮತ್ತಷ್ಟು ಕರುಗಳು ಬಲಿಯಾಗಿವೆ. ಒಟ್ಟು 50ಕ್ಕೂ ಹೆಚ್ಚು ಕರುಗಳ ಸಾವನ್ನಪ್ಪಿದ್ದು, ಉಳಿದ 50 ಕರುಗಳನ್ನು ರಕ್ಷಣೆ ಮಾಡಲಾಗಿದೆ. ಶಾಸಕ ಕೆ.ಎಸ್.ಲಿಂಗೇಶ್ ಸ್ವತಃ ಸ್ಥಳಕ್ಕೆ ಹೋಗಿ ಕರುಗಳ ರಕ್ಷಣೆ ಮಾಡಿದ್ದಾರೆ. ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ತಾಲೂಕು ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಸ್ವತಃ ವಿಡಿಯೋ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಬೇಲೂರು ಶಾಸಕ ಲಿಂಗೇಶ್ ಆಗ್ರಹಿಸಿದ್ದಾರೆ.