ಮಂಗಳೂರು: ನಗರದ ಕಾವೂರು ಜಂಕ್ಷನ್ ಬಳಿ ಎರಡು ಭಿನ್ನ ಕೋಮಿನ ತಂಡಗಳ ನಡುವೆ ನಡು ರಸ್ತೆಯಲ್ಲಿಯೇ ಜಗಳ ನಡೆದಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.
ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಸಂಚರಿಸುತ್ತಿದ್ದ ಸ್ಕೂಟರೊಂದಕ್ಕೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ. ಸ್ಕೂಟರಿನಲ್ಲಿದ್ದ ಹಿಂದೂ ಸಂಘಟನೆಯ ಯುವಕರು ಕಾರು ಚಾಲಕನ ಬಗ್ಗೆ ಆಕ್ಷೇಪ ತೆಗೆದಿದ್ದಾರೆ. ಈ ವಿಚಾರಕ್ಕೆ ಇತ್ತಂಡಗಳ ನಡುವೆ ವಾಗ್ವಾದ ನಡೆದಿದೆ. ಸ್ವಲ್ಪ ಸಮಯದಲ್ಲೇ ಎರಡೂ ಕಡೆಯ ಯುವಕರು ಸ್ಥಳದಲ್ಲಿ ಸೇರಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಎರಡೂ ಗುಂಪುಗಳ ಯುವಕರು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿ ಪ್ರಹಾರವಾಗುತ್ತಲೇ ಸೇರಿದ್ದ ಯುವಕರೆಲ್ಲಾ ಓಡಿ ತಪ್ಪಿಸಿಕೊಂಡಿದ್ದಾರೆ. ಪೊಲೀಸರ ಸಕಾಲಿಕ ಕ್ರಮದಿಂದಾಗಿ ಭಿನ್ನ ಕೋಮುಗಳ ಯುವಕರ ನಡುವೆ ನಡೆಯಲಿದ್ದ ಬೀದಿ ಕಾಳಗ ತಪ್ಪಿದಂತಾಗಿದೆ.