ರಾಮಕುಂಜ: ಗ್ರಾ.ಪಂ.ಮಾಜಿ ಸದಸ್ಯ, ಹೊಸಮಣ್ಣು ದಿ.ಚಂದಪ್ಪ ಕುಲಾಲ್‌ರವರ ಪುತ್ರ ದಯಾನಂದ ಕುಲಾಲ್(36)ರವರು ಅ.27 ರಂದು ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಯಾನಂದ ಕುಲಾಲ್ ರವರು ಎರಡು ವರ್ಷದ ಹಿಂದೆ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಯಲ್ಲಿಯೇ ಇದ್ದರು. 1 ತಿಂಗಳ ಹಿಂದೆ ಅವರಿಗೆ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚೇತರಿಸಿಕೊಂಡು ಮನೆಯಲ್ಲಿಯೇ ಇದ್ದರು. ಅ.27 ರಂದು ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ನಿಧನರಾದರೆಂದು ತಿಳಿದುಬಂದಿದೆ.
ದಯಾನಂದ ಕುಲಾಲ್ ರವರು ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿದ್ದು, ಬಿಜೆಪಿ ಸುಳ್ಯ ಮಂಡಲ ಹಿಂದುಳಿದ ವರ್ಗಗಳ ಸಮಿತಿ ಪದಾಧಿಕಾರಿ, ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಮಕುಂಜ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಇವರು ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದರು.
ಮೃತರು ತಾಯಿ ಜಾನಕಿ, ಪತ್ನಿ ಪುತ್ರಿ,ಸಹೋದರ, ಸಹೋದರಿಯನ್ನು ಅಗಲಿದ್ದಾರೆ.