ಅದೆಷ್ಟೋ ಮನಸ್ಸುಗಳು ಆಕೆಯ ಕಷ್ಟಕ್ಕೆ ಕರಗಿದ್ದವು, ಆಕೆ ಮೊದಲಿನಂತಾಗಲೆಂದು ನೂರಾರು ಮಂದಿ ಆಕೆಗೆ ಹಣದ ನೆರವನ್ನೂ ಕೂಡ ನೀಡಿದ್ದರು. ಸಾವಿರಾರು ಜನರ ಹರಕೆ ಹಾರೈಕೆ ವಿಫಲವಾಗಿದೆ. ಶ್ರೇಯಾ ಎಂಬು ಹೆಣ್ಣು ಮಗಳು ವಯಸ್ಸಲ್ಲದ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾಳೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಕಾರ್ಕಳ ತಾಲೂಕು ಈದು ಗ್ರಾಮದ ನಿವಾಸಿಗಳಾದ ಸಾಧು ಪೂಜಾರಿ ಮತ್ತು ಸುಮ ದಂಪತಿಯ ಪುತ್ರಿ ಶ್ರೇಯಾ ಪೂಜಾರಿ (18) ಚಿಕಿತ್ಸೆ ಫಲಕಾರಿಯಾಗದೆ ಅ.27 ರಂದು ನಿಧನಳಾಗಿದ್ದಾಳೆ.
ಶ್ರೇಯಾ ಕಳೆದ 6 ತಿಂಗಳುಗಳಿಂದ ಅಂಡಕೋಶದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಕ್ಯಾನ್ಸರ್ ತಗುಲಿದ ಪ್ರಾಥಮಿಕ ಹಂತದಲ್ಲಿ ಸರ್ಜರಿ ನಡೆಸಲಾಗಿತ್ತು. ಆದರೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶ್ರೇಯಾ ಮತ್ತೆ ಆರೋಗ್ಯವಾಗಿ ಬರಲೆಂದು ಹತ್ತು ಹಲವು ದಾನಿಗಳು ನೆರವಿನ ಹಸ್ತ ಚಾಚಿದ್ದರು. ಆದರೆ ವಿಧಿಲಿಖಿತ ಬೇರೆಯೇ ಇತ್ತು. ಹಲವು ಸಮಯದ ತನ್ನ ಜೀವನ್ಮರಣ ಹೋರಾಟದಲ್ಲಿ ಶ್ರೇಯಾ ಕೊನೆಗೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದು, ಸಾವಿರಾರು ಜನರ ಪ್ರಾರ್ಥನೆ ವ್ಯರ್ಥವಾಗಿದೆ.