ಮಂಗಳೂರು: ತಾಲೂಕಿನ ತೊಕ್ಕೊಟ್ಟು ಪ್ರದೇಶದಿಂದ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪ್ರದೇಶದ ವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳನ್ನು ನಿಯೋಜಿಸುವಂತೆ ಹ್ಯೂಮನ್ ರೈಟ್ಸ್ ಅಂಡ್ ಆಗೈನ್ಸ್ಟ್ ಪೊಲ್ಯೂಷನ್ ಫೋರಮ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಅರ್ಜಿ ನೀಡಲಾಯಿತು.
ಮಂಗಳೂರು ತಾಲೂಕಿನ, ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಪ್ರದೇಶದಿಂದ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪ್ರದೇಶದವರೆಗೆ ಇದುವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಯಾವುದೇ ಬಸ್ಸುಗಳನ್ನು ನಿಯೋಜಿಸಿಲ್ಲ
ಕೇವಲ ಖಾಸಗಿ ಬಸ್ಸುಗಳು ಮಾತ್ರ ಚಲಿಸುತ್ತಿದ್ದು ಸದ್ರಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಮತ್ತು ಬಡ ಕುಟುಂಬದ ಜನರಿಗೆ ಕಷ್ಟಮಯ ಜೀವನವನ್ನು ಸಾಗಿಸುವಂತಾಗಿದೆ.
ಬೆಳಗ್ಗಿನ ಸಮಯದಲ್ಲಿ ಖಾಸಗಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರ ಜೀವನವು ತೀರಾ ನರಕ ಸದೃಶವಾಗಿರುತ್ತದೆ. ವಿದ್ಯಾರ್ಥಿಗಳು ಈ ಖಾಸಗಿ ಬಸ್ಸುಗಳಲ್ಲಿ ನೇತಾಡಿಕೊಂಡು ವಿದ್ಯಾಭ್ಯಾಸವನ್ನು
ಮಾಡುವಂತಹ ಹೀನಾಯ ದೃಶ್ಯಗಳು ಹೃದಯ ಕರಗಿಸುವಂತಾಗಿದೆ. ವೃದ್ಧರು, ಮಕ್ಕಳು ಹೇಳತೀರದಷ್ಟು ಸಂಕಷ್ಟಮಯ ಜೀವನವನ್ನು ಈ ಖಾಸಗಿ ಬಸ್ಸುಗಳಿಂದ ಅನುಭವಿಸುತ್ತಿರುವರು. ಈ ಖಾಸಗಿ ಬಸ್ಸುಗಳ ಪ್ರಯಾಣ ದರವು ಕೂಡ ಗಗನಕ್ಕೇರಿರುತ್ತದೆ. ಸಾಮಾನ್ಯ ಸಾರ್ವಜನಿಕರು ಈ ಕೊರೋನ ಸಂಕಷ್ಟದ ಸಮಯದಲ್ಲಿ ಈ ಗಗನಕ್ಕೇರಿದ ದರವನ್ನು ಪಾವತಿಸಲು ಆಗದಂತಹ ಪರಿಸ್ಥಿತಿ ಏರ್ಪಟ್ಟಿದೆ. ಆದುದರಿಂದ ಮೇಲಿನ ಎಲ್ಲಾ ಅಂಶವನ್ನು ಅತೀ ಗಂಭೀರವೆಂದು ಪರಿಗಣಿಸಿ ಈ ಖಾಸಗಿ ಬಸ್ಸುಗಳ ಬದಲಾಗಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್ಸುಗಳನ್ನು ಸದ್ರಿ ಮೇಲೆ ತಿಳಿಸಿದ ತೊಕ್ಕೊಟ್ಟಿನಿಂದ ಮೆಲ್ಕಾರ್ ನವರೆಗೆ ಚಲಿಸುವಂತೆ ವಿಶೇಷ ಆದೇಶ ಹೊರಡಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹಕೀಂ ಕೂರ್ನಡ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.