ಮಂಗಳೂರು: ಮೊಬೈಲ್‌ಗೆ ಲಿಂಕ್ ಕಳುಹಿಸಿ ವಿಶ್ವಾಸ ಬರುವಂತೆ ಮಾತುಕತೆ ನಡೆಸಿ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು 45,000 ರೂ.ವನ್ನು ವ್ಯಕ್ತಿಯೊಬ್ಬರಿಗೆ ವಂಚಿಸಿದ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮರೋಳಿಯ ಬ್ಯಾಂಕ್‌ವೊಂದರಲ್ಲಿ ಖಾತೆ ಹೊಂದಿರುವ ವ್ಯಕ್ತಿಯು ಸ್ನಾಪ್ ಡೀಲ್ ಆನ್‌ಲೈನ್ ಆ್ಯಪ್‌ನಲ್ಲಿ ಟೀ ಕಪ್ ವೊಂದನ್ನು ಆರ್ಡರ್ ಮಾಡಿದ್ದರು. ಅವರಿಗೆ ಫೆ.8ರಂದು ಅಪರಿಚಿತ ವ್ಯಕ್ತಿಯೋರ್ವನು 8327710873 ಸಂಖ್ಯೆಯಿಂದ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಲಾರಂಭಿಸಿ ಎರಡು ಲಿಂಕ್‌ಗಳನ್ನು ಕಳುಹಿಸಿ ಕರೆಯನ್ನು ಹೋಲ್ಡ್‌ನಲ್ಲಿಟ್ಟು ಲಿಂಕ್‌ಗಳ ಮೂಲಕ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್ ಮತ್ತು ಒಟಿಪಿ ವಿವರಗಳನ್ನು ಪಡೆದುಕೊಂಡ. ಟೀ ಕಪ್ ಆರ್ಡರ್ ಮಾಡಿದ ಹಿನ್ನೆಲೆಯಲ್ಲಿ ಕರೆ ಬಂದಿರಬಹುದು ಎಂದು ಅಂದಾಜಿಸಿದ ವ್ಯಕ್ತಿಯು ವಿವರಗಳನ್ನು ನೀಡಿದ್ದಾರೆ.
ಕೆಲ ಸಮಯದಲ್ಲೇ ಅವರ ಖಾತೆಯಿಂದ ಹಂತಹಂತವಾಗಿ 45,000 ರೂ.ಗಳನ್ನು ವರ್ಗಾಯಿಸಿ ಮೋಸ ಮಾಡಲಾಗಿದೆ. ಈ ಬಗ್ಗೆ ಸೆನ್ ಅಪಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.