ಉತ್ತರದ ನಾಡಿನ ಚುನಾವಣೆಗೆ ಇನ್ನೊಂದು ದಿನ ಬಾಕಿಯಿದ್ದು, ಚುನಾವಣೆಗೂ 48 ಗಂಟೆಯ ಮುಂಚೆಯೇ ಕಮಲ ಪಡೆ ತನ್ನ ಪ್ರಣಾಳಿಕೆಯನ್ನ ರಿಲೀಸ್ ಮಾಡಿದೆ.
ನಾಡಿನ ರೈತರು ಹಾಗೂ ವಿದ್ಯಾರ್ಥಿಗಳಿಗೆ ಭರಪೂರದ ಭರವಸೆಗಳನ್ನೇ ಉಣಬಡಿಸಿದೆ. ಮುಖ್ಯವಾಗಿ ಲವ್ ಜಿಹಾದ್‌ಗೆ ಕಾಯ್ದೆ ಜಾರಿ ತರುವ ಭರವಸೆ ಪ್ರಸ್ತಾಪವಾಗಿದೆ.
ಲವ್ ಜಿಹಾದ್‌ಗೆ ಶಿಕ್ಷೆ, ಮತದಾರರಿಗೆ ಭರಪೂರ ಭರವಸೆ:
ಭಾರೀ ಜಿದ್ದಾಜಿದ್ದಿನ ಪ್ರಚಾರದ ನಡುವೆಯೇ ಕೊನೆಗೂ ಎಲೆಕ್ಷನ್ ದಿನಾಂಕ ಸಮೀಪಿಸಿ ಬಿಟ್ಟಿದೆ. ಬರುವ ಬುಧವಾರ ಉತ್ತರ ಪ್ರದೇಶದಲ್ಲಿ ಮತಯುದ್ಧ ಆರಂಭವಾಗಲಿದೆ. ಕೊನೆಯ ದಿನದವರೆಗೂ ಉತ್ತರದ ಮತದಾರರನ್ನ ಸೆಳೆಯೋಕೆ ರಾಜಕೀಯ ಪಕ್ಷಗಳು ಭಾರೀ ತಂತ್ರವನ್ನೇ ಹಣೆಯುತ್ತಿದ್ದಾರೆ. ಚುನುವಾಣಾ ಕದನಕ್ಕೆ ಇನ್ನೂ 48 ಗಂಟೆಗಳು ಬಾಕಿ ಇರುವಂತೆ ಇವತ್ತು ಕಮಲ ಪಡೆ ತನ್ನ ಪ್ರಣಾಳಿಕೆಯನ್ನ ರಿಲೀಸ್ ಮಾಡಿದೆ. ಮತದಾರರಿಗೆ ಭರವಸೆಗಳ ಭರಾಪೂರವನ್ನೇ ನೀಡಿದೆ.
ಉತ್ತರ ಪ್ರದೇಶದಲ್ಲಿ ಇವತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆಗೊಳಿಸಿದ್ರು. ಲವ್ ಜಿಹಾದ್ ಪ್ರರಣದಲ್ಲಿ ಶಿಕ್ಷೆ, ನೀರಾವರಿಗೆ ಉಚಿತ ವಿದ್ಯುತ್, ಕನಿಷ್ಠ ಬೆಂಬಲ ಬೆಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ, ಹೀಗೆ ಭರವಸೆಗಳ ಭರಪೂರವನ್ನೇ ಉಣಬಡಿಸಿದ್ರು.
ಕಮಲ ಕೋಟೆಯ ಪ್ರಣಾಳಿಕೆ.. ಏನೇನಿದೆ..?
ಈ ಬಾರಿಯ ಕಮಲ ಪಡೆಯ ಪ್ರಣಾಳಿಕೆಯಲ್ಲಿ ಲವ್ ಜಿಹಾದ್ ಪ್ರಕರಣಗಳಲ್ಲಿ 1 ಲಕ್ಷ ರೂಪಾಯಿ ದಂಡದೊಂದಿಗೆ ಕನಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಖಚಿತಪಡಿಸೋದಾಗಿ ತಿಳಿಸಲಾಗಿದೆ. ಅಲ್ಲದೆ ನೀರಾವರಿಗಾಗಿ ರೈತರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋಧಿ ಮತ್ತು ಭತ್ತದ ಖರೀದಿಯನ್ನು ಬಲಪಡಿಸೋದಾಗಿ ಹೇಳಲಾಗಿದೆ. ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ಸೇರಿದಂತೆ 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ನೀಡಲಾಗಿದೆ.
ಪ್ರಧಾನಮಂತ್ರಿಯವರ ಉಜ್ವಲ ಯೋಜನೆಯಡಿ ದೀಪಾವಳಿ ಮತ್ತು ಹೋಳಿ ವೇಳೆ 2 ಉಚಿತ ಎಲ್‌ಪಿಜಿ ಸಿಲಿಂಡರ್ ಒದಗಿಸಲಾಗುತ್ತೆ. ಇದಲ್ಲದೆ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಿಗೆ ಸ್ವಯಂ ಉದ್ಯೋಗಾವಕಾಶಗಳ ಭರವಸೆ ನೀಡಲಾಗಿದೆ.
ಇನ್ನು ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅಮಿತ್ ಶಾ, ಕಳೆದ ಬಾರಿಯ ಪ್ರಣಾಳಿಕೆಯನ್ನ ಟೀಕಿಸಿದ್ದ ಅಖಿಲೇಶ್ ಯಾದವ್ಗೆ ತಿರುಗೇಟು ಕೊಟ್ಟರು. ನಮ್ಮ 212 ಪ್ರತಿಜ್ಞೆಗಳಲ್ಲಿ 92 ಪ್ರತಿಶತವನ್ನು ಈಡೇರಿಸಿರೋದಾಗಿ ತಿಳಿಸಿದ್ರು. ಕೆಲ ದಿನಗಳ ಹಿಂದೆ ಅಖಿಲೇಶ್ ಯಾದವ್ ಅವರು ನಮ್ಮ 2017ರ ಸಂಕಲ್ಪ ಪತ್ರವನ್ನು ಟೀಕಿಸಿ ನಾವು ಏನು ಮಾಡಿದ್ದೇವೆ ಎಂದು ಕೇಳಿದರು. ನಮ್ಮ 212 ಪ್ರತಿಜ್ಞೆಗಳಲ್ಲಿ 92 ಪ್ರತಿಶತವನ್ನು ಈಡೇರಿಸಲಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದರು.
ಅಖಿಲೇಶ್ ಗೆಲುವು ಖಚಿತ
ಬಿಜೆಪಿಯನ್ನ ಬಂಗಾಳ ಸೋಲಿಸುತ್ತೆ ಅನ್ನೋದಾದ್ರೆ ಉತ್ತರ ಪ್ರದೇಶಕ್ಕೆ ಯಾಕೆ ಆಗೋದಿಲ್ಲ. ನನಗೆ ಅಪಾರ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವವಿದೆ. ಅಖಿಲೇಶ್ ಯಾದವ್ ಈ ಬಾರಿ ಖಂಡಿತವಾಗಿಯೂ ಗೆಲುವು ಸಾಧಿಸುತ್ತಾರೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.
ಚುನಾವಣಾ ಅಖಾಡ ಹತ್ತಿರವಾದಂತೆಲ್ಲಾ ರಾಜಕೀಯ ಪಕ್ಷಗಳು ಜಿದ್ದಾಜಿದ್ದಿಗೆ ಬೀಳ್ತಿವೆ. ಉತ್ತರದ ಗದ್ದುಗೆಗಾಗಿ ತಂತ್ರ ಪ್ರತಿತಂತ್ರಗಳನ್ನೇ ರೂಪಿಸ್ತಿದ್ದಾರೆ. ಒಂದು ಕಡೆ ಬಿಜೆಪಿ ಭರವಸೆಗಳ ಭರಾಪೂರವನ್ನೇ ಉಣಬಡಿಸಿದ್ರೆ, ಇತ್ತ ಅಖಿಲೆಶ್ ಜೊತೆ ದೀದಿ ಕಮಲ ಕಲಿಗಳ ವಿರುದ್ಧ ವಾಗ್ದಾಳಿಯನ್ನೇ ನಡೆಸ್ತಿದ್ದಾರೆ. ಸದ್ಯ ಚುನಾವಣಾ ಅಖಾಡಕ್ಕೆ ಇನ್ನೊಂದು ದಿನ ಬಾಕಿ ಇದ್ದು, ನಾಳೆ ಮತ್ತಷ್ಟು ರಂಗೇಳೋದ್ರಲ್ಲಿ ಯಾವುದೇ ಅನುಮಾನವಿಲ್ಲ.