ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹ ಸೇರಿದಂತೆ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಸದ್ದು ಮಾಡಿದ್ದ ‘ಮಂಗ್ಳೂರು ಮುಸ್ಲಿಂ’ ಫೇಸ್‌ಬುಕ್ ಖಾತೆಯ ತನಿಖೆಯನ್ನು ಸಿಐಡಿ ವಹಿಸಿಕೊಂಡಿದೆ.
ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ‘ಮಂಗ್ಳೂರು ಮುಸ್ಲಿಂ’ ಪೇಜ್‌ನಲ್ಲಿ ವ್ಯಂಗ್ಯ, ದೃಶ್ಯ ವಾಹಿನಿಯೊಂದರ ನಿರೂಪಕರಿಗೆ ಬೆದರಿಕೆ, ರಾಜ್ಯ ಸಚಿವರೊಬ್ಬರ ಮೇಲೆ ಆರೋಪದ ಆಕ್ಷೇಪಾರ್ಹ ಸಂದೇಶ ಹಾಕಲಾಗಿತ್ತು. ಇದು ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿದ್ದು, ಭಾರಿ ಟೀಕೆ ವ್ಯಕ್ತವಾಗಿತ್ತು. ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದರು.
ಈ ಖಾತೆಯನ್ನು ಬ್ಲಾಕ್ ಮಾಡುವ ಉದ್ದೇಶದಿಂದ ನಗರ ಪೊಲೀಸರು ಫೇಸ್‌ಬುಕ್ ಸಂಸ್ಥೆಯಲ್ಲಿ ಮಾಹಿತಿ ಕೇಳಿದ್ದರು. ಈ ಮಧ್ಯೆ ಈ ಪೇಜ್‌ನ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಐಡಿ ವಹಿಸಿಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
2016ರಲ್ಲಿ ಕಟೀಲು ಶ್ರೀದೇವಿಯ ಅವಹೇಳನ ಹಾಗೂ ಹಿಂದೂ ಧಾರ್ಮಿಕ ನಿಂದನೆಗೆ ಸಂಬಂಧಪಟ್ಟಂತೆ ‘ಮಂಗಳೂರು ಮುಸ್ಲಿಂ’ ಪೇಜ್ ವಿರುದ್ಧ ಮಂಗಳೂರು ಮತ್ತು ಬೆಂಗಳೂರಿನಲ್ಲಿ 2016ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಆ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು.
2016ರ ಪ್ರಕರಣದಲ್ಲಿ ‘ಮಂಗಳೂರು ಮುಸ್ಲಿಂ’ ಫೇಸ್‌ಬುಕ್ ಪೇಜ್ ಇದ್ದರೆ ಈಗ ಆ ಹೆಸರು ಬದಲಾಯಿಸಿ ‘ಮಂಗ್ಳೂರ್ ಮುಸ್ಲಿಂ’ ಎಂದು ಹಾಕಲಾಗಿದೆ. ಕೇವಲ ಒಂದು ಅಕ್ಷರ ಬದಲಾಯಿಸಿ ಹೊಸ ಪೇಜ್ ರೂಪಿಸಲಾಗಿದೆ. ಈ ಫೇಸ್‌ಬುಕ್ ಪೇಜ್ ಲೈಕ್ ಮಾಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಳೆದ 3 ವರ್ಷಗಳಿಂದ ನಾನಾ ಪ್ರಕರಣಗಳಲ್ಲಿ ಭಾಗಿಯಾದ ಸಂಘಟನೆ, ವ್ಯಕ್ತಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 1,064 ವ್ಯಕ್ತಿಗಳು, ಗುಂಪುಗಳ ಮೇಲೆ ಕಠಿಣ ನಿಗಾ ಇರಿಸಲಾಗಿದೆ. ಆನ್‌ಲೈನ್ ಮೀಡಿಯಾ ಡೆಸ್ಕ್ 55 ಆನ್‌ಲೈನ್ ಮೀಡಿಯಾ ಪೋರ್ಟಲ್, 5 ಮೀಡಿಯಾ ಕ್ಲಬ್, 14 ಆನ್‌ಲೈನ್ ನ್ಯೂಸ್ ಚಾನೆಲ್, 65 ರೆಗ್ಯುಲರ್ ವೆಬ್ ನ್ಯೂಸ್ ಚಾನೆಲ್‌ಗಳ 139 ಖಾತೆಗಳ ಮೇಲೆ ನಿಗಾ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.