ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಎರಡನೇ ವಾರ್ಡಲ್ಲಿ ‘ಮಿಸ್ಡ್ ಕಾಲ್ ಕೊಡಿ-ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿಕೊಳ್ಳಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.ದಾರಂದಕುಕ್ಕು ನಿವಾಸಿ ಕೆ.ಗಣೇಶ್ ಹೆಗ್ಡೆಯವರ ಮನೆಯ ವಠಾರದಲ್ಲಿ ನಡೆದ ಕುಡಿಯುವ ನೀರಿನ ಬಳಕೆದಾರರ ಸಭೆಯಲ್ಲಿ ಈ ಯೋಜನೆ ಘೋಷಿಸಲಾಗಿದೆ. ಗ್ರಾ.ಪಂ.ಸದಸ್ಯ ಜಯಪ್ರಕಾಶ್ ಬದಿನಾರು ಅವರ ನೇತೃತ್ವದಲ್ಲಿ ಈ ಆಂದೋಲನ ಆರಂಭಿಸಲಾಗಿದ್ದು ವಾರ್ಡ್ ಸದಸ್ಯರಾದ ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ವಿಶ್ವನಾಥ ಕೃಷ್ಣಗಿರಿ ಮತ್ತು ಪಿಡಿಓ ಚಿತ್ರಾವತಿರವರು ಕೈ ಜೋಡಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಈ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ನೀರಿನ ಸಮಸ್ಯೆ ಇದ್ದವರು ‘ಮಿಸ್ಡ್ ಕಾಲ್ ಕೊಡಿ- 24 ಗಂಟೆಯೊಳಗೆ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ’ ಎಂಬ ಯೋಜನೆಯನ್ನು ಸಭೆಯಲ್ಲಿ ಘೋಷಿಸಲಾಯಿತು.
ನೀರಿನ ಸಮಸ್ಯೆ ಇದ್ದವರು ಕುಡಿಯುವ ನೀರಿನ ಸಮಿತಿಯ ಅಧ್ಯಕ್ಷರ ಅಥವಾ ಕಾರ್ಯದರ್ಶಿಯ ಮೊಬೈಲ್ ಫೋನ್ ಗೆ ಮಿಸ್ಡ್ ಕಾಲ್ ಕೊಡಬೇಕು, ಅಧ್ಯಕ್ಷರು ಫಲಾನುಭವಿಗೆ ಮರು ಕಾಲ್ ಕೊಡುತ್ತಾರೆ. ನಂತರ , ಅಧಿಕಾರಿಗಳು ಸಮಸ್ಯೆಯನ್ನು ಕೇಳುತ್ತಾರೆ. ನಂತರ ಅಧಿಕಾರಿಗಳು ಆ ಭಾಗದ ಸದಸ್ಯರಿಗೆ ಮಿಸ್ ಕಾಲ್ ಕೊಡುತ್ತಾರೆ. ಬಳಿಕ ಸದಸ್ಯರು ಪಂಪ್ ಆಪರೇಟರ್ ಗೆ ಕಾಲ್ ಕೊಟ್ಟು ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ವಿನೂತನ ಯೋಜನೆಗೆ ಫಲಾನುಭವಿಗಳು ಬೆಂಬಲ ಸೂಚಿಸಿದರು. ಸ್ಥಳೀಯರಾದ ತಿಮ್ಮಪ್ಪ ಮೂಲ್ಯ, ಕೆ ಶೀಲಾ,ವಿಜಯ, ಮೈಮುನಾ, ಗೀತಾ ಪಿ,ಲಲಿತಾ, ಮೀನಾಕ್ಷಿ, ವಿಜಯಲಕ್ಷ್ಮಿ, ಚಂದ್ರಶೇಖರ್ ಕುಲಾಲ್, ಕೆ ಇಬ್ರಾಹಿಂ, ಆನಂದ, ಸತೀಶ್ ಮಡಿವಾಳ, ಶಿವಪ್ರಸಾದ್ ಮುಂತಾದವರು ಸಲಹೆ ಸೂಚನೆ ನೀಡಿದರು. ಕುಡಿಯುವ ನೀರಿನ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ದೂರವಾಣಿ ಸಂಖ್ಯೆಯನ್ನು ಸಭೆಯಲ್ಲಿ ಪ್ರಕಟಿಸಲಾಯಿತು.

