ಪುತ್ತೂರು: ಕಾಲಸ್ಥಿತಿ ಅಥವಾ ಮುಂದಿನ ಸಂಕಷ್ಟದ ಸಂದರ್ಭದಲ್ಲಿ ಪರಿವರ್ತನೆ ಆಗಬೇಕು ಇಡೀ ಹಿಂದೂ ಸಮಾಜದಲ್ಲಿ ಐಕ್ಯಮತ್ಯ ಬೆಳೆಯಬೇಕು. ಬೇರೆ ಬೇರೆ ಭಿನ್ನಾಭಿಪ್ರಾಯ, ಸಂಘಟನೆಗಳೆಲ್ಲವೂ ಒಗ್ಗಟ್ಟಾಗಬೇಕು. ದೇಶದ ಅಸ್ತಿತ್ವಕ್ಕಾಗಿ ನಾವೆಲ್ಲ ಒಂದಾಗಬೇಕು, ಮುಂದಿನ ಪೀಳಿಗೆಯ ಬದುಕಿಗೆ, ಆದ್ಯಾತ್ಮ ಬೆಳಗಲು ಭಜನಾಮೃತ ಕಾರ್ಯಕ್ರಮ ಅತೀ ಅವಶ್ಯಕ ಎಂದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಶ್ರೀ ಮಂಜುನಾಥ ಸ್ವಾಮಿಯ ಅಶೀರ್ವಾದದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶಿರ್ವಾದದಿಂದ ಹಾಗೂ ಮಾರ್ಗದರ್ಶನದಿಂದ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸಹಕಾರದೊಂದಿಗೆ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧಬ್ರಹ್ಮಕಲಶೋತ್ಸವ ಸಲುವಾಗಿ ಏ.24 ರಂದು ನಡೆಯಲಿರುವ ‘ಭಜನಾಮೃತ’ ಎಂಬ ಬೃಹತ್ ಕಾರ್ಯಕ್ರಮಕ್ಕೆ ಮಾ.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಆರ್ಶೀವಚನ ನೀಡಿದರು.
ಭಜನಾ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬರುವವರಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ತುಂಬಾ ಉತ್ತಮ ರೀತಿಯಲ್ಲಿ ನಡೆಸುವ ಜವಾಬ್ದಾರಿ ಇದೆ. ಹಿಂದೂ ಸಮಾಜದ ಯಾವುದೇ ಮಠ, ಮಂದಿರ ಎಲ್ಲವೂ ನಮ್ಮ ಹಿಂದೂ ಸಮಾಜದ್ದು, ಅದನ್ನು ಬೆಳಗಿಸುವುದು ನಮ್ಮ ಕರ್ತವ್ಯ. ದೇಶದ ಅಸ್ತಿತ್ವ ಉಳಿಸಲು ಸದೃಢ ಹಿಂದೂ ಸಮಾಜ ಉಳಿಯಬೇಕು. ಅದು ಬಲಿಷ್ಟ ಆಗಬೇಕಾದರೆ ನಮ್ಮೊಳಗೆ ಐಕ್ಯತೆ, ಒಗ್ಗಟ್ಟು ಇರಬೇಕು. ಜಾತಿ, ಜಾತಿಯ ಕಟ್ಟುಪಾಡು ಬಿಟ್ಟು ಎಲ್ಲರು ಒಗ್ಗಟ್ಟಾಗಬೇಕು. ನಾವೆಲ್ಲ ಸದ್ಗುಣ ಶೀಲರಾಗಬೇಕು. ಭಜನಾಮೃತ ಕಾರ್ಯಕ್ರಮಕ್ಕೆ ಭಜಕರು , ಭಜನೆ ಮಾತ್ರವಲ್ಲದೆ ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯದಲ್ಲಿ ಭಾಗಿಯಾಗಿ ಅಳಿಲ ಸೇವೆ ನೀಡುವ ಪ್ರತಿಜ್ಞೆ ಮಾಡೋಣ ಎಂದರು.
೧ ಸಾವಿರ ತಂಡದಿಂದ ನಿರಂತರ ಭಜನೆ:
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರೂ ಭಜನಾಮೃತ ಸಮಿತಿ ಗೌರವ ಮಾರ್ಗದರ್ಶಕರಾಗಿರುವ ಅಶೋಕ್ ಕುಮಾರ್ ರೈ ಅವರು ಮಾತನಾಡಿ ತಾಯಿ ಮಹಿಷಮರ್ದಿನಿಯ ಬ್ರಹ್ಮಕಲಶ ಆಡಂಭರದಲ್ಲಿ ಮಾಡದೆ ಭಕ್ತಿ ಭಾವನೆ ಮೂಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ದೇವಿಯ ಸಾನಿದ್ಯ ವೃದ್ಧಿಯಾಗುವ ನಿಟ್ಟಿನಲ್ಲಿ ಸಂಪ್ರದಾಯವಾಗಿ ಪೂಜೆ ಪುರಸ್ಕಾರ ನಡೆಯಬೇಕು. ಬಳಿಕ ಸುಮಾರು ೧ಲಕ್ಷಕ್ಕೂ ಮಿಕ್ಕಿ ಅನ್ನಪ್ರಸಾದ ವಿತರಣೆ ಮಾಡಬೇಕೆಂದಿದ್ದೇವೆ. ಇಂತಹ ಸಂದರ್ಭದಲ್ಲಿ ಭಕ್ತರಲ್ಲಿ ಭಕ್ತಿಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಭಜನಾಮೃತ ಕಾರ್ಯಕ್ರಮ ಬೆಳಗ್ಗಿನಿಂದ ನಿರಂತರ ನಡೆಯಲಿದೆ. ಒಂದು ಸಾವಿರ ಭಜನಾ ತಂಡದ ಗುರಿ ಇದೆ. ಈಗಾಗಲೇ ೨೫೦ ಭಜನಾ ತಂಡ ನೋಂದಾವಣೆ ಮಾಡಿದ್ದಾರೆ. ಪ್ರತಿ ತಾಲೂಕಿನಲ್ಲಿ ಭಜನಾಮೃತ ಕಾರ್ಯಕ್ರಮದ ಜೊತೆಗೆ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡುವಲ್ಲಿ ಸಂಪರ್ಕ ಮಾಡಲಾಗಿದೆ. ಹಾಗಾಗಿ ಎಲ್ಲರು ಕಾರ್ಯಕ್ರಮದಲ್ಲಿ ಬಂದು ಯಶಸ್ವಿಗೆ ಸಾಕ್ಷಿಯಾಗಬೇಕೆಂದರು.
ದೇವಿಗೆ ಭಜನೆ ಸಮರ್ಪಣೆ ಮಾಡುವಲ್ಲಿ ನಾವೆಲ್ಲ ಪಾಲ್ಗೊಣ:
ದಾಸಸಂಕೀರ್ತನೆಗಾರಾಗಿರುವ ರಾಜ್ಯ ಭಜನಾ ಪರಿಷತ್ ಸದಸ್ಯ ರಾಮಕೃಷ್ಣ ಕಾಟುಕುಕ್ಕೆ ಅವರು ಮಾತನಾಡಿ ಕಲಿಯುಗದಲ್ಲಿ ಸಾಮೂಹಿಕ ಭಜನೆಗೆ ಫಲವಿದೆ. ಮನಸ್ಸು ಮತ್ತು ಹಂಬಲವಿದ್ದಾಗ ಎಲ್ಲಾ ಕಾರ್ಯ ಯಶಸ್ಸು ಆಗುತ್ತದೆ. ಎಲ್ಲಾ ಭಜನಾ ಮಂಡಳಿ ಮತ್ತು ಭಜನಾರ್ಥಿಗಳನ್ನು ಒಟ್ಟು ಸೇರಿಸುವಲ್ಲಿ ಕೇವಲ ಸಮಿತಿಯವರು ಮಾತ್ರವಲ್ಲ ನಮ್ಮ ಪಾಲು ಇದೆ. ದೇವಿಗೆ ಭಜನೆ ಸಮರ್ಪಣೆ ಮಾಡುವಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕೆಂದರು. ಭಜನೆಯಲ್ಲಿ ದೇವಿ ಶ್ಲೋಕಗಳನ್ನು ಪಠಣ ಮಾಡುವಲ್ಲಿ ಮೊದಲು ಅದರ ಧ್ವನಿ ಮುದ್ರಿತ ಮಾಡಿ ಎಲ್ಲರೂ ಒಂದೇ ರೀತಿಯಲ್ಲಿ ಹಾಡುವವರಿದ್ದೇವೆ. ದೇವಿಯ ಕೀರ್ತನೆ ಸ್ತುತಿಸುವುದನ್ನು ಕೂಡಾ ಇಲ್ಲಿ ಹೇಳಿಕೊಡಲಾಗುವುದು. ಒಟ್ಟಿನಲ್ಲಿ ಭಜನಾ ಕಾರ್ಯಕ್ರಮ ಯಶಸ್ವಿಯಾಗಬೇಕು. ಭಜನಾರ್ಥಿಗಳು ಕೇವಲ ನಮ್ಮ ನಮ್ಮಕ್ಷೇತ್ರದಲ್ಲಿ ಭಜನೆ ಹೇಳಿದರೆ ಸಾಲದು ಇಂತಹ ಉತ್ತಮ ವೇದಿಕೆಯಲ್ಲೂ ಭಜನೆ ಪ್ರತಸ್ತುತ ಪಡಿಸಬೇಕು ಎಂದರು.
ಸನ್ಮಾನ:
ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಫರ್ಟಿಲೈಸರ್ ಅಡ್ವೈಸರ್ ಫಾರಂ(ಎಫ್.ಎ.ಎಫ್) ನ ಸದಸ್ಯರಾಗಿ ಆಯ್ಕೆಗೊಂಡ ಕೆ. ರಾಜರಾಮ ಶೆಟ್ಟಿ ಕೋಲ್ಪೆಗುತ್ತು ಅವರನ್ನು ಭಜನಾಮೃತ ಸಮಿತಿಯಿಂದ ಸನ್ಮಾನಿಸಲಾಯಿತು.
ಭಜನೆ ಮೂಲಕ ಎಲ್ಲರೂ ಸೇರುವುದು ನಮ್ಮ ಭಾಗ್ಯ:
ಭಜನಾಮೃತ ಸಮಿತಿ ಗೌರವ ಮಾರ್ಗದರ್ಶಕರೂ ಮತ್ತು ಭಜನಾ ಪರಿಷತ್ ಗೌರವಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಅವರು ಮಾತನಾಡಿ ಭಜನೆಗೆ ಎಲ್ಲರನ್ನು ಒಟ್ಟು ಸೇರಿಸುವ ಶಕ್ತಿ ಇದೆ. ಇಲ್ಲಿ ಒಟ್ಟಿಗೆ ಆಗುವುದು ಅನಿವಾರ್ಯವೂ ಮತ್ತು ನಮ್ಮ ಭಾಗ್ಯವೂ ಕೂಡಾ ಎಂದ ಅವರು ವಲಯ ಮತ್ತು ತಾಲೂಕು ಅಧ್ಯಕ್ಷರ ಮತ್ತು ಪ್ರತಿ ತಾಲೂಕು ಸಮಿತಿಗೆ ಭಜನಾಮೃತ ಸಮಿತಿಯ್ನಾಗಿ ಒಂದು ತಿಂಗಳ ಮಟ್ಟಿಗೆ ಸಮಿತಿ ಅಧ್ಯಕ್ಷ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಸೂಚಿಸಿದರಲ್ಲದೆ ಅವರ ಮಾರ್ಗದರ್ಶನದಲ್ಲಿ ಸಭೆಯಲ್ಲಿ ಸಮಿತಿ ರಚನೆ ನಡೆಯಿತು.
ಮಹಿಷಮರ್ದಿನಿ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರೂ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿಯಾಗಿರುವ ನಿರಂಜನ ರೈ ಮಠಂತಬೆಟ್ಟು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಕಾರ್ಯಕ್ರಮ ನಡೆಯುವ ರೂಪರೇಶೆ ತಿಳಿಸಿದರು. ಏ.೨೪ರಂದು ಚಿನ್ಮಯ ಸಭಾಂಗಣದಲ್ಲಿ ಬೆಳಿಗ್ಗೆ ಭಜನೆ ಆರಂಭಗೊಳ್ಳಲಿದೆ. ಬಳಿಕ ದೇವಳದಿಂದ ಜ್ಯೋತಿಯೊಂದಿಗೆ ಮುಖ್ಯವೇದಿಕೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ಮತ್ತು ನಿರಂತರ ಭಜನೆ ಕಾರ್ಯಕ್ರಮ ನಡೆಯಲಿದೆ. ಭಜನೆ ಕಾರ್ಯಕ್ರಮ ನಮ್ಮ ಕುಟುಂಬದ ಕಾರ್ಯಕ್ರಮ ಎಂದು ಎಲ್ಲರು ಭಾಗವಹಿಸಬೇಕೆಂದು ವಿನಂತಿಸಿದರು.
ಭಜನಾಮೃತ ಸಮಿತಿ ಗೌರವ ಮಾರ್ಗದರ್ಶಕರಾದ ಅರುಣ್ ಕುಮಾರ್ ಪುತ್ತಿಲ, ಜನಜಾಗೃತಿ ಒಕ್ಕೂಟದ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಬ್ಬಯ್ಯ ರೈ, ಭಜನಾಪರಿಷತ್‌ನ ರಾಜ್ಯ ಸದಸ್ಯ ಬಾಲಕೃಷ್ಣ ಪಂಜ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಯ್ಯ ಬಲ್ಲಾಳ್, ಶ್ರೀ ಕ್ಷೆ.ಧ.ಗ್ರಾ. ಯೋ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಹಾರ್ಪಾಳ, ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು ಕ್ಷೇತ್ರದ ಅಧ್ಯಕ್ಷ ಅಶ್ವಥ್ ಪೂಜಾರಿ, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಬಣ್ಣ ರೈ, ಕಾಸರಗೋಡು ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಪುರುಷೋತ್ತಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ಪರಿಷತ್ ಸಂಚಾಲಕರೂ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಂತ್ ಪುರೋಳಿ ಅವರು ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು, ಚಂದ್ರನ್, ಶ್ರೀ ಕ್ಷೇ.ಧ.ಗ್ರಾ.ಯೋ ಮೇಲ್ವಿಚಾರಕ ರವಿ, ಸಂಚಾಲಕ ರಾಜಮಣಿ, ಪ್ರಶಾಂತ್, ದಿನೇಶ್ ಸಾಲಿಯಾನ್, ಶೀನಪ್ಪ ಪುತ್ತೂರು, ಪದ್ಮನಾಭ ಆಚಾರ್ಯ, ಕೃಷ್ಣಪ್ಪ, ಚೆನ್ನಪ್ಪ, ಯೋಗೀಶ, ಬಿ.ಸಿ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ನಿರ್ದೇಶಕ ಪ್ರವೀಣ್, ಭಜನಾಮೃತ ಕಾರ್ಯಕ್ರಮ ಸಂಯೋಜಕ ರಾಮಮಣಿ ರೈ ಮಠಂತಬೆಟ್ಟು ಅತಿಥಿಗಳನ್ನು ಗೌರವಿಸಿದರು. ಸುನಿತಾ ಮತ್ತು ರೇಣುಕ ಪ್ರಾರ್ಥಿಸಿದರು. ಶ್ರೀ ಕ್ಷೇ.ಧ.ಗ್ರಾ. ಯೋ ಬಿ ಸಿ ಟ್ರಸ್ಟ್ ನಿರ್ದೇಶಕ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಶ್ರೀ.ಕ್ಷೇ.ಗ್ರಾ.ಯೋ ಪುತ್ತೂರು ಯೋಜನಾಧಿಕಾರಿ ಆನಂದ್ ವಂದಿಸಿದರು. ಲೋಕೇಶ್ ಬೆತ್ತೊಡಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು, ವಿಟ್ಲ, ಕಾಸರಗೋಡು, ಸುಳ್ಯದ ಭಜನಾ ಪರಿಷತ್ ಅಧ್ಯಕ್ಷರು, ಪಗ್ರತಿ ಬಂಧು ಒಕ್ಕೂಟದ ವಲಯ ಅಧ್ಯಕ್ಷರುಗಳು, ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.