ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್.ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮೊದಲ ಕೋಕಾ ಕೇಸ್‍ನ ತೀರ್ಪು ಇಂದು ಪ್ರಕಟವಾಗಲಿದೆ.
ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟವಾಗಲಿದ್ದು, ರಾಜ್ಯದ ಮೊದಲ ಕೋಕಾ ಪ್ರಕರಣ ಇದಾಗಿದೆ. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ.ಪುರಾಣಿಕಮಠ ಅವರು ವಕಾಲತ್ತು ವಹಿಸಿದ್ದರು. ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ್ ಕುಮಾರ್, ಮಾಜಿ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಅಣ್ಣಾ ಮಲೈ ಸೇರಿ ಒಟ್ಟು 210 ಜನರು ಸಾಕ್ಷಿ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಮುದ್ದೆಮಾಲನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಅಂಕೋಲಾ ಉದ್ಯಮಿ, ಬಿಜೆಪಿ ನಾಯಕ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತೀರ್ಪು ಬರಲಿದೆ. 2013 ರ ಡಿಸೆಂಬರ್ 21 ರಂದು ಸುಪಾರಿ ನೀಡಿ ಆರ್.ಎನ್. ನಾಯಕ್ ಹತ್ಯೆ ಆರೋಪ ಕೇಳಿಬಂದಿತ್ತು. 3 ಕೋಟಿ ರೂ. ಹಫ್ತಾ ನೀಡದ ಹಿನ್ನೆಲೆ ಹತ್ಯೆ ಮಾಡಿದ ಆರೋಪ ಕೇಳಿಬಂದಿತ್ತು.
ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿದ್ದರು. 2015ರ ಫೆಬ್ರವರಿ 12 ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜಾ ಬಂಧನವಾಗಿತ್ತು. ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಡಿ ಮೊರಕ್ಕೊದಲ್ಲಿ ಬಂಧಿಸಲಾಗಿತ್ತು. ಬಳಿಕ ಭಾರತಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಹಸ್ತಾಂತರಿಸಲಾಗಿತ್ತು. 2015ರ ಆಗಸ್ಟ್ 14ರಂದು ಭಾರತಕ್ಕೆ ಬನ್ನಂಜೆ ರಾಜಾ ಕರೆತರಲಾಗಿತ್ತು. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಬೆಳಗಾವಿ ಕೋಕಾ ವಿಶೇಷ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಲಿದೆ.